ವಾರಾಣಸಿ : ವಿಮಾನದ ತುರ್ತು ನಿರ್ಗಮನದ ಬಾಗಿಲನ್ನುಎರಡು ಬಾರಿ ತೆರೆಯಲು ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನಿಂದ ಬಂದಿದ್ದ ಯುವಕನೊಬ್ಬನನ್ನು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅದ್ಘಾನ್ ಎಂದು ಗುರುತಿಸಲಾಗಿದೆ. ಈತ ಶನಿವಾರ ರಾತ್ರಿ ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ‘ಇಂಡಿಗೋ’ (6E 185) ವಿಮಾನದ ಪ್ರಯಾಣಿಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ಬೆಂಗಳೂರಿನಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅನ್ನಾನ್ ಏಕಾಏಕಿ ವಿಮಾನದ ಬಾಗಿಲು ತೆರೆಯಲು ಮುಂದಾಗಿದ್ದಾನೆ.
ಇದನ್ನು ಕಂಡು ಬೆಚ್ಚಿಬಿದ್ದ ವಿಮಾನದ ಸಿಬ್ಬಂದಿ ಕೂಡಲೇ ಆತನನ್ನು ತಡೆದು, ಸಮಾಧಾನಪಡಿಸಿ ಸೀಟಿನಲ್ಲಿ ಕುಳ್ಳಿರಿಸಿದ್ದರು.ಇನ್ನು ಎರಡನೇ ಬಾರಿ ವಾರಾಣಸಿಯಲಿ ಲ್ಯಾಂಡ್ ಆದ ಮೇಲೆ ಬಾಗಿಲು ತೆರೆಯಲು ಯತ್ನಿಸಿದ್ದಾನೆ ಆ ವೇಳೆ ಸಿಬ್ಬಂದಿ ಆತನನ್ನು ತಡೆದಿದ್ದರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ವಿಚಿತ್ರ ಹೇಳಿಕೆ ನೀಡಿದ್ದಾನೆ.
ನಾನು ಮೊದಲ ಬಾರಿಗೆ ವಿಮಾನ ಏರಿದ್ದೆ, ಆಕಾಶದಲ್ಲಿ ಹಾರುವಾಗ ವಿಪರೀತ ಆತಂಕ ಮತ್ತು ಗಾಬರಿಯಾಯಿತು ಅದಕ್ಕೆ ಹೊರಗೆ ಹೋಗಲು ಬಾಗಿಲು ತೆರೆಯಲು ಯತ್ನಿಸಿದೆ, ಎಂದು ಸಮಜಾಯಿಷಿ ನೀಡಿದ್ದಾನೆ.ಇಂಡಿಗೋ ವಿಮಾನ ಸಂಸ್ಥೆಯ ದೂರಿನ ಮೇರೆಗೆ ಬಾಬತ್ಪುರ ವಿಮಾನ ನಿಲ್ದಾಣದಲ್ಲಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.








