ವಿಜಯನಗರ : ಇಂದು ದೇಶದಾದ್ಯಂತ 76ನೇ ಗಣರಾಜ್ಯೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಧ್ವಜಾರೋಹಣ ನಡೆಸಿ ರಾಜ್ಯಪಾಲ ಥಾವರ ಚಂದ್ ಗೆಹ್ಲೊಟ್ ಅವರು ಭಾಷಣ ಮಾಡುತ್ತಿದ್ದಾರೆ. ಇದರ ಮಧ್ಯ ವಿಜಯನಗರದಲ್ಲಿರುವ ದೇಶದ ಎರಡನೇ ಅತಿ ದೊಡ್ಡ ಧ್ವಜಸ್ಥಂಭದಿಂದ ತ್ರಿವರ್ಣ ಧ್ವಜ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಹೌದು ಇಲ್ಲಿನ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಬೃಹತ್ ಧ್ವಜಸ್ತಂಭಕ್ಕೆ ಏರುತ್ತಿದ್ದ ಬೃಹತ್ ಧ್ವಜ ಕುಸಿದು ಬಿದ್ದ ಘಟನೆ ಭಾನುವಾರ ಗಣರಾಜ್ಯೋತ್ಸವ ನಡೆಯುತ್ತಿದ್ದ ವೇಳೆಯೇ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈ ಧ್ವಜವನ್ನು ಸಾಂಕೇತಿಕವಾಗಿ ಏರಿಸಿ ವೇದಿಕೆಗೆ ಬಂದು ಸಂಪ್ರದಾಯಿಕ ಧ್ವಜಾರೋಹಣ ನೆರವೇರಿಸಿದ್ದರು.
ಬಳಿಕ ಪರೇಡ್ ವೀಕ್ಷಿಸಿ ಪರೇಡ್ ತಂಡಗಳು ಪಥಸಂಚಲನದಲ್ಲಿ ನೀಡಿದ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ತ್ರಿವರ್ಣ ಧ್ವಜ ಒಮ್ಮಿಂದೊಮ್ಮೆಲೆ ಕುಸಿದು ಬಿತ್ತು. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಧ್ವಜಸ್ತಂಭದ ಬುಡದಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿತು.ಸಚಿವರು ಭಾಷಣ ಕೊನೆಗೊಳಿಸಿದ ಬಳಿಕ, ಧ್ವಜ ಕುಸಿಯಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.