ಬೆಂಗಳೂರು : 2023ರಲ್ಲಿ 134 ಸ್ಥಾನ ಪಡೆದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂತು. ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯದ ಜನರಿಗೆ ಭರವಸೆ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರು. ಆದರೆ ಇದೀಗ ಈ ಒಂದು ಗ್ಯಾರೆಂಟಿ ಯೋಜನೆಗಳೇ ರಾಜ್ಯ ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ ಎಂದು ಹೇಳಲಾಗುತ್ತಿದೆ.
ಹೌದು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಆದ್ರೆ ಇದೇ ಗ್ಯಾರಂಟಿ ಯೋಜನೆಗಳು ಇದೀಗ ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆಯಾ? ಅನ್ನೋ ಪ್ರಶ್ನೆ ಎದ್ದಿದೆ.
ಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಗೃಹಲಕ್ಷ್ಮಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದಕ್ಕೆ ಪೂರಕವೆಂಬಂತೆ ನಿನ್ನೆ ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೌದು ಎರಡು ತಿಂಗಳ ಹಣ ಬಾಕಿ ಉಳಿಸಿಕೊಂಡಿರುವುದಾಗಿ ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದರು. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ, ಶಕ್ತಿ ಯೋಜನೆಯ ಸಾವಿರಾರು ಕೋಟಿ ಹಣವನ್ನೂ ಬಾಕಿ ಉಳಿಸಿಕೊಂಡಿರುವುದು ಈಗ ದಾಖಲೆ ಸಮೇತ ಬೆಳಕಿಗೆ ಬಂದಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಂದ ಬರೋಬ್ಬರಿ 4,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜ್ ಅವರ ಪ್ರಶ್ನೆಗೆ ಖುದ್ದು ಸಾರಿಗೆ ಸಚಿವರೇ ಉತ್ತರ ನೀಡಿದ್ದಾರೆ. ಇದರಿಂದ ಸರ್ಕಾರ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆಯಾ ಅಂತ ವಿಪಕ್ಷಗಳು ಪ್ರಶ್ನೆ ಎತ್ತಿವೆ.
ಇನ್ನು ಶಕ್ತಿ ಯೋಜನೆಯಲ್ಲಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ತಮ್ಮ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆಸಿದ್ದಾರೆ. ಮೂರು ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ ಸರ್ಕಾರ ಬಾಕಿ ಉಳಿಸಿಕೊಂಡಿದೆ. 2023 ರಿಂದ ಇಲ್ಲಿಯವರ್ಗೆ 4006 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಆರೋಪ ಮಾಡಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ, ವಾಯುವ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒಟ್ಟು 4006 ಕೋಟಿ ಬಾಕಿ ಇದೆ. 4 ನಿಗಮಗಳಿಗೆ 2023-24ನೇ ಸಾಲಿನಲ್ಲಿ 1,180.62 ಕೋಟಿ ಬಾಕಿ, ಅದೇ ರೀತಿಯಾಗಿ 2024-25 ನೇ ಸಾಲಿನಲ್ಲಿ 1170.45 ಕೋಟಿ ರೂಪಾಯಿ ಹಾಗೆ 2025-26 ನೇ ಸಾಲಿನ ನವೆಂಬರ್ 25ರಂತೆ 1655.40 ಕೋಟಿ ರೂಪಾಯಿಗಳಿಗೆ ಬಾಕಿ ಮೊತ್ತ 4006.47 ಕೋಟಿ ರೂಪಾಯಿಗೆ ತಲುಪಿದೆ ಎಂದು ಟ್ವೀಟ್ ಮೂಲಕ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.








