ಬೆಂಗಳೂರು : ರಾಜ್ಯ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆಯು ವೇಳಾಪಟ್ಟಿ ಪ್ರಕಟಿಸಿದ್ದು, ಮಾ.26ರಿಂದ ಆರಂಭವಾಗಿರುವ ಪ್ರಕ್ರಿಯೆ ಮೇ 31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ, ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳು ತಮ್ಮ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಖಾಲಿ ಹುದ್ದೆ ಗಳಿಗೆ ಅನುಗುಣವಾಗಿ ತಮ್ಮದೇ ಆಡಳಿತ ಮಂಡಳಿಯ ಮತ್ತೊಂದು ಶಾಲೆಗೆ ಅಥವಾ ಬೇರೆ ಶಾಲೆಗೆ ವರ್ಗಾವಣೆ ಕೋರಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿ ಸಲು ಏ.28ರವರೆಗೆ ಅವಕಾಶ ನೀಡಲಾಗಿದೆ.
ಬಿಇಒಗಳು ಪ್ರಸ್ತಾವನೆ ಪರಿಶೀಲಿಸಿ ಜಿಲ್ಲಾ ಉಪನಿರ್ದೇಶಕರಿಗೆ ಮಾ.27ರಿಂದ ಮೇ 5ರ ವರೆ ಸಲ್ಲಿಸಲು ಅವಕಾಶವಿದೆ. ಉಪ ನಿರ್ದೇಶಕರು ಸೂಕ್ತ ಶಿಫಾರಸಿನೊಂದಿಗೆ ಬೆಂಗಳೂರು, ಮೈಸೂರು ವಿಭಾಗದವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರಿಗೆ, ಕುಲಬುರಗಿ ಮತ್ತು ಧಾರವಾಡ ವಿಭಾಗದವರು ಆಯಾ ನಿರ್ದೇಶಕರು, ಅಪರ ಆಯುಕ್ತರಿಗೆ ಮಾ.28 ರಿಂದ ಮೇ 12ರವರೆಗೆ ಪ್ರಸ್ತಾವನೆ ವರ್ಗಾಯಿಸಬೇಕು.
ಅಂತರ ವಿಭಾಗದ ವರ್ಗಾವಣೆ ಕೋರಿ ಬಂದ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಪರ ಆಯುಕ್ತರ ಶಿಫಾರಸಿನೊಂದಿಗೆ ಏ.1 ರಿಂದ ಮೇ 19ರೊಳಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ನಂತರ ವರ್ಗಾವಣೆ ಕೋರಿ ಬಂದ ಪ್ರಸ್ತಾವನೆಗಳನ್ನು ಸಂಬಂಧಿಸಿದ ಪ್ರಾಧಿಕಾರಗಳು ಏ.5ರಿಂದ ಮೇ 31ರೊಳಗೆ ಇತ್ಯರ್ಥಗೊಳಿಸಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.