ಕೊಪ್ಪಳ : ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಇದೀಗ ಅಧಿಕಾರಿಗಳ ವರ್ಗಾವಣೆ ಜೋರಾಗಿದೆ ಎಂದು ಸಿಎಂ ಆಪ್ತ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳ ವರ್ಗಾವಣೆ ಕುರಿತಂತೆ ಸ್ವಪಕ್ಷದ ವಿರುದ್ಧವೇ ಬಸವರಾಜ ರಾಯರೆಡ್ಡಿ ಈ ರೀತಿ ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿಸಿದೆ.
ನಿನ್ನೆ ಕೊಪ್ಪಳದಲ್ಲಿ ರಾಜ್ಯ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ, ಸಂಸದರು ಹಾಗೂ ಸಚಿವರು ಅಧಿ ಕಾರಿಗಳನ್ನು ಬಳಸಿಕೊಂಡು ಅಥವಾ ಹಣದ ಮೂಲಕ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನಪರ ಕೆಲಸಗಳಿಗೆ ಹೊಡೆತ ಬೀಳುತ್ತಿದೆ. ಹೀಗಾಗಿ ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಎಲ್ಲ ಇಲಾಖೆಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಯಾಗಬೇಕಿದೆ ಎಂದರು.
ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಅದರಂತೆ ಹೆಚ್ಚು ಹಣ ವರ್ಗಾವಣೆಯಾಗುವ ಇಲಾಖೆಗಳಲ್ಲಿ ಇದೇ ರೀತಿ ಕೌನ್ಸೆಲಿಂಗ್ ಮೂಲಕ ಅಧಿಕಾರಿಗಳನ್ನು ವರ್ಗಾಯಿಸಬೇಕೆಂಬ ಚಿಂತನೆ ನಡೆದಿದೆ ಎಂದು ಬಸವರಾಜ ರಾಯರೆಡ್ಡಿ ಇದೆ ಸಂದರ್ಭದಲ್ಲಿ ತಿಳಿಸಿದರು.