ಧಾರವಾಡ : ಧಾರವಾಡದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಚಿಕನ್ ಬಾರ್ಬೆಕ್ಯೂ ಮಾಡಲು ಹಚ್ಚಿದ್ದ ಒಲೆಯ ಹೊಗೆ ರೂಮ್ ತುಂಬಾ ಆವರಿಸಿ ಓರ್ವ ಸಾವನ್ನಪ್ಪಿ, 6 ಮಂದಿ ಅಸ್ವಸ್ಥರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಅಸ್ವಸ್ಥರಾದವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಧಾರವಾಡ ನಗರದ ನಂದಿನಿ ಲೇಔಟ್‌ನಲ್ಲಿ ಈ ಒಂದು ದುರಂತ ಸಂಭವಿಸಿದ್ದು, ಮೃತ ಕಾರ್ಮಿಕನನ್ನು ಬಿಬೆಕ್ ಎಂದು ಗುರುತಿಸಲಾಗಿದ್ದು, ಅಸ್ವಸ್ಥರಾದವರನ್ನು ನರೇಶ್ (45), ನಿತೇಶ್ (18), ಡಿಕೆಶಿ (40), ಸುಧನ್ (30), ಕುಮಾರ್ (50) ಮತ್ತು ಲಕ್ಷ್ಮಣ್ (30) ಎಂದು ಗುರುತಿಸಲಾಗಿದೆ. ಅಸ್ವಸ್ಥರನ್ನೆಲ್ಲಾ ತಕ್ಷಣ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ (ಜ.9) ರಾತ್ರಿ ಈ ಏಳೂ ಜನ ಕೆಲಸಗಾರರು ತಾವು ವಾಸವಿದ್ದ ಮನೆಯಲ್ಲಿ ಬಾರ್ಬೆಕ್ಯೂ ಮಾಡಲು ತಂದೂರಿ ರೊಟ್ಟಿ ಮಾಡುವ ಒಲೆ ಹೊತ್ತಿಸಿದ್ದರು. ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದರು. ಆದರೆ, ಒಲೆಯಿಂದ ಹೊಗೆ ಆವರಿಸಿ ಏಳೂ ಜನರಿಗೆ ಉಸಿರಾಟದ ತೊಂದರೆಯಾಗಿದೆ. ಬೆಳಗಿನವರೆಗೂ ಏಳೂ ಜನ ಮಲಗಿದ ಜಾಗದಲ್ಲೇ ಮಲಗಿದ್ದರು. ಬೆಳಿಗ್ಗೆ ಕೆಲಸಗಾರರು ಬರದೇ ಇದ್ದಾಗ ಮಾಲೀಕರೇ ಸ್ಥಳಕ್ಕೆ ಹೋಗಿ ನೋಡಿದಾಗ ಈ ಅವಾಂತರ ನಡೆದಿದ್ದು ಗೊತ್ತಾಗಿದೆ.
ಬೆಳಿಗ್ಗೆ ಹೊಟೇಲ್ ಕಾರ್ಮಿಕರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೊಟೇಲ್ ಮಾಲಿಕರು ಅವರ ವಾಸದ ಮನೆಗೆ ತೆರಳಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.








