ವಾರಾಣಾಸಿ : ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಿಸಲು ನಿಷೇಧಿತ ಹಾಗೂ ತೀಕ್ಷ್ಣವಾದ ಗಾಜುಲೇಪಿತ ದಾರವನ್ನು ಬಳಸಿದ ಪರಿಣಾಮ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಉತ್ತರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ದಾರದಿಂದ ಕತ್ತು ಸೀಳಲ್ಪಟ್ಟು ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಕ್ರಾಂತಿ ಹಬ್ಬದ ವೇಳೆ ಗಾಳಿಪಟ ಹಾರಾಟದಿಂದ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದಲ್ಲಿ 28 ವರ್ಷದ ಸಮೀರ್ ಹಂಶಿ ಶಾಲಾ ಕ್ಯಾಂಪಸ್ ಸಮೀಪ ಇಂತಹ ದುರಂತದಲ್ಲಿ ಮೃತಪಟ್ಟಿದ್ದಾರೆ. ಕೇರಕತ್ ಪಟ್ಟಣದ ನಿವಾಸಿಯಾಗಿದ್ದ ಅವರು ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡು ಗಂಭೀರ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಜೌನಪುರ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಇಂತಹ ಎರಡು ಸಾವುಗಳು ವರದಿಯಾಗಿವೆ. ಡಿಸೆಂಬರ್ 11ರಂದು ಶಾಲಾ ಶಿಕ್ಷಕ ಸಂದೀಪ್ ತ್ರಿಪಾಠಿ (45) ಗಾಜುಲೇಪಿತ ದಾರದಿಂದ ಕತ್ತು ಸೀಳಲ್ಪಟ್ಟು ಮೃತಪಟ್ಟಿದ್ದರು. ಬುಧವಾರ ಉತ್ತರಪ್ರದೇಶದ ಲಕೀಂಪುರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕ ಅವಧೀಶ್ ಕುಮಾರ್ (38) ಮೃತಪಟ್ಟಿದ್ದಾರೆ. ಅವರು ತೆಲಂಗಾಣದಿಂದ ಕೃಷಿ ಕೆಲಸಕ್ಕಾಗಿ ಆಗಮಿಸಿದ್ದರು. ಅಲ್ಲದೆ, ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯ ಬಂಬುಳಗಿ ಗ್ರಾಮದಲ್ಲಿ ಸಂಜೀವ ಕುಮಾರ್ (48) ಎಂಬವರು ಕೂಡ ಇದೇ ರೀತಿಯ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.








