ಮೈಸೂರು : ಮೈಸೂರು ತಾಲೂಕಿನ ಮೀನಾಕ್ಷಿಪುರದ ಹಿನ್ನೀರಿನಲ್ಲಿ ಕಾವೇರಿ ಹಿನ್ನೀರಿನಲ್ಲಿ ಈಜಾಡಲು ಬಂದಿದ್ದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮಿಮ್ಸ್) ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸವನ್ನಪ್ಪಿದ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ.
ಮಂಡ್ಯ ನಗರದಲ್ಲಿರುವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಮೀನಾಕ್ಷಿಪುರದ ಕಾವೇರಿ ಹಿನ್ನೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು. ಮುಳುಗಿದ ವಿದ್ಯಾರ್ಥಿಗಳನ್ನು ಪ್ರಶಾಂತ್, ಸಿದ್ದೇಶ್ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಇವರು ಸ್ನಾನದ ವೇಳೆ ನೀರಿನ ಆಳವನ್ನು ಮತ್ತು ರಭಸವಾಗಿ ಹರಿಯುತ್ತಿದ್ದ ನೀರಿನ ಹರಿವು ಬಗ್ಗೆ ತಿಳಿದುಕೊಳ್ಳದೇ ಆಳಕ್ಕೆ ಹೋಗಿದ್ದಾರೆ. ಈ ವೇಳೆ ಒಬ್ಬ ಆಳಕ್ಕೆ ಹೋದ ನಂತರ ಅವರನ್ನು ಕಾಪಾಡಲು ಇನ್ನೊಬ್ಬ, ಮತ್ತೊಬ್ಬ ಎಂಬಂತೆ ಮೂವರೂ ಆಳಕ್ಕೆ ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದಾರೆ.
ಇನ್ನು ದಡದ ಮೇಲಿದ್ದ ಇತರೆ ಸ್ನೇಹಿತರು ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿದ್ದಾರೆ ಎಂದು ಅಲ್ಲಿದ್ದವರಿಗೆ ತಿಳಿಸಿದ್ದಾರೆ. ಒಟ್ಟು 6 ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೂವರು ನೀರಿನಲ್ಲಿ ಮುಳುಗಿದರೆ, ಇನ್ನು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೂ ಮಾಹಿತಿ ರವಾನಿಸಲಾಗಿದೆ.ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗಿದವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇಳವಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.