ಬೆಂಗಳೂರು : ಇತ್ತೀಚಿಗೆ ಕಲ್ಬುರ್ಗಿಯಲ್ಲಿ ಉದ್ಯಮಿಗಳ ಮೇಲೆ 2 ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರನ್ನು ಹನಿಟ್ರ್ಯಾಪ್ಗೆ ಸಿಲುಕಿಸಲು ಯತ್ನಿಸಿ, 6 ಕೋಟಿ ನೀಡುವಂತೆ ಒತ್ತಾಯಿಸಿದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ ಮೂವರು ಆರೋಪಿಗಳನ್ನು ವಿದ್ಯಾ ಬಿರಾದರ್ ಪಾಟೀಲ್, ಗಗನ್ ಹಾಗೂ ಸೂರ್ಯನಾರಾಯಣ್ ಎಂದು ತಿಳಿದುಬಂದಿದೆ. ಕಳೆದ ಆಗಸ್ಟ್ 31ರಂದು ಸ್ಬಾಮೀಜಿಗೆ ಕರೆ ಮಾಡಿದ ಆರೋಪಿತೆ ವಿದ್ಯಾ, ತಾನು ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರ ಸಹೋದರಿಯಾಗಿದ್ದೇನೆ ಎಂದು ಹೇಳಿದ್ದಾಳೆ.
ಬಳಿಕ ನಿಮಗೆ ಸಂಬಂಧಿಸಿ, ಮಹಿಳೆಯೊಂದಿಗಿನ ಆಶ್ಲೀಲ ವಿಡಿಯೋ ಕಳುಹಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಹೀಗಾಗಿ, ಕೂಡಲೇ ಭೇಟಿಯಾಗುವಂತೆ ಹೇಳಿದ್ದರು.ಇದರಂತೆ ಭೇಟಿಯಾದಾಗ ಸ್ವಾಮೀಜಿಯವರಿಗೆ ಸಂಬಂಧಿಸಿದ ಆಶ್ಲೀಲ ವಿಡಿಯೊಗಳಿವೆ ಎಂದು ಆರೋಪಿಗಳು ತಿಳಿಸಿದ್ದಾರೆ.
ಈ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಬಾರದು ಎಂದರೆ 6 ಕೋಟಿ ರೂ. ಹಣ ನೀಡಬೇಕು. ಕೂಡಲೇ 50 ಲಕ್ಷ ರೂ. ಹಣ ನೀಡಿ ಒತ್ತಾಯಿಸಿದ್ದರು ಎಂದು ರುದ್ರಮುನಿ ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದರು.ಈ ಬಗ್ಗೆ ರುದ್ರಮುನಿ ಸ್ವಾಮೀಜಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.