ತುಮಕೂರು : ರಾಜ್ಯ ಸರ್ಕಾರದಿಂದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠಕ್ಕೆ ನೀರಾವರಿ ವಿದ್ಯುತ್ ಬಿಲ್ 70.31 ಲಕ್ಷ ರೂ. ನೀಡುವಂತೆ ನೊಟೀಸ್ ಜಾರಿ ಮಾಡಲಾಗಿತ್ತು.ಇದೀಗ ಸಿದ್ಧಗಂಗಾ ಮಠಕ್ಕೆ ನೀಡಲಾಗಿದ್ದ 70.31 ಲಕ್ಷ ರೂ. ನೀರಾವರಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಘೋಷಿಸಿದ್ದಾರೆ.
ಹೌದು ಈ ವಿಚಾರವಾಗಿ ಸಚಿವ ಎಂ ಬಿ ಪಾಟಿಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಿದ್ಧಗಂಗಾ ಮಠವು ಪ್ರತಿದಿನವೂ 10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಅನ್ನ ದಾಸೋಹ ಶಿಕ್ಷಣ ನೀಡುತ್ತಾ ಬಂದಿದೆ. ಸರಕಾರ ಕೂಡ ಇದನ್ನು ಸಿಎಸ್ಆರ್ ರೀತಿಯಲ್ಲಿ ತನ್ನ ಸಾಮಾಜಿಕ ಜವಾಬ್ದಾರಿ ಎಂದು ಭಾವಿಸುತ್ತದೆ. ಮಠಕ್ಕೆ ನೋಟಿಸ್ ಕೊಟ್ಟಿದ್ದರೆ ಅದು ತಪ್ಪು. ಸಿದ್ಧಗಂಗಾ ಮಠವು ವಿಶ್ವದಲ್ಲೇ ಶ್ರೇಷ್ಠವಾದ ಮಠವಾಗಿದೆ. ಅಲ್ಲಿ ಜಾತ್ಯತೀತವಾಗಿ ಶಿಕ್ಷಣ ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ನೀರನ್ನು ಬಳಸಿಕೊಳ್ಳಲು ಮಠಕ್ಕೆ ಅನುಮತಿ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಠಕ್ಕೆ ವಿದ್ಯುತ್ ಬಿಲ್ ಪಾವತಿಗೆ ಪತ್ರ ನೀಡಿದ್ದು ತಪ್ಪಾಗಿದೆ. ಮಠಕ್ಕೆ ನೀರು ಬಳಸಿದ್ದರೂ ತಪ್ಪೇನಿಲ್ಲ, ಇನ್ನು ಮುಂದೆಯೂ ಮಠಕ್ಕೆ ನೀರನ್ನು ಬಳಕೆ ಮಾಡಬಹುದು. ಈಗ ಬಂದಿರುವ ನೊಟೀಸಿನ ಹಣವನ್ನು ಸರ್ಕಾರದಿಂದ ಮನ್ನಾ ಮಾಡಲಾಗುವುದು.ಸಿದ್ಧಗಂಗಾ ಮಠವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಪೂರೈಸುವ ನೀರನ್ನು ಬಳಸಿಕೊಂಡಿದ್ದರೆ ತಪ್ಪೇನೂ ಇಲ್ಲ. ಇದರ ಬಾಬ್ತು ಏನೇ ಇದ್ದರೂ ಅದನ್ನು ಮನ್ನಾ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಕೆಐಎಡಿಬಿ ಸಿಇಒ ಮತ್ತು ಮುಖ್ಯ ಎಂಜಿನಿಯರ್ ಜತೆ ಮಾತನಾಡಲಾಗಿದೆ ಎಂದು ಹೇಳಿದರು.