ಹಾಸನ : ಈಗಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ಜೋರಾಗಿದ್ದು ಒಂದು ಕಡೆ ಐದು ವರ್ಷಗಳ ಕಾಲ ನಮ್ಮ ತಂದೆಯೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದರೆ ಮತ್ತೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಆಪ್ತರು ಎರಡು ಬಾರಿ ಚಾನ್ಸ್ ಮಿಸ್ ಆಗಿರಬಹುದು ಆದರೆ ಮೂರನೇ ಬಾರಿ ಮಿಸ್ ಆಗಲ್ಲ ಎಂದು ಸಿಎಂ ಕುರ್ಚಿಗಾಗಿ ವಾಕ್ಸಮರ ನಡೆಯುತ್ತಿದೆ.
ಇದೀಗ ಮುಂಬರುವ ದಿನಮಾನಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ದೇಶದ ರಾಜಕೀಯದಲ್ಲಿಯೇ ದೊಡ್ಡ ಪರಿವರ್ತನೆಗಳು ನಡೆಯಲಿದ್ದು, ಹಾಸನ ಜಿಲ್ಲೆಯೇ ಮತ್ತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ದಿನಗಳು ದೂರವಿಲ್ಲ. ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಹಾಸನದೊಳಗಿಂದಲೇ ಹೊರಬರುವ ಸಾಧ್ಯತೆ ಇದೆ ಎಂದು ಗಜೇಂದ್ರಗಡದ ತಳ್ಳಿಹಾಳ ಸಂಸ್ಥಾನ, ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಭವಿಷ್ಯ ನುಡಿದಿದ್ದಾರೆ.
ಬರುವ ದಿನಮಾನಗಳಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅವನ ಮನೆತನಕ್ಕೆ ಅಂಟಿಕೊಂಡಿರುವ ಕಪ್ಪುಚುಕ್ಕಿ ಹೊರಗೆ ಬರುತ್ತದೆ. ಹಳ್ಳಿ ಹಳ್ಳ ತುಂಬಿ ಹರಿಯುವಾಗ ಉಳ್ಳವನು ಶಿವಪೂಜೆ ಮಾಡುವಾಗ, ಸಂಸರಾ ಸಂಗಿ ನಿಸ್ಸಂಗ ಪರಿತ್ಯಾಗಿ ಅವನೆ ಮತ್ತೊಂದು ಸಾರಿ ಹಾಸನದೊಳಗ ಕರ್ನಾಟಕದ ಪ್ರಧಾನಿಯೇ ಆಗಬಹುದು, ಮುಖ್ಯಮಂತ್ರಿಯೇ ಆಗಬಹುದು ಎಂದಿದ್ದಾರೆ. ಒಂದು ದಿವಸ ಇರುತೈತೆ, ಹೋಗುತೈತೆ. ಈ ಹಿಂದೆ 2016 ರಲ್ಲಿ ಕಂಬಳಿ ಉರುಳಾದಿತು ಎಂದಾಗ ಇದೆ ಸಿಎಂ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿಯಾದರು.
ರಾಜಕೀಯದ ಬಗ್ಗೆ ನಾನು ಇದ್ದಿದ್ದು ಇದ್ದಂಗೆ ಹೇಳುವೆ. ನಾನು ಯಾರ ಬಳಿ ಹಣ ತಿಂದಿರುವುದಿಲ್ಲ. ಯಾವ ರಾಜಕಾರಣಿಯಾದರೂ ನಮ್ಮ ಮಠಕ್ಕೆ ಬಂದರೆ ಚಾಪೆ ಮೇಲೆ ಕೂರಬೇಕು. ಯಾವ ಶಾಸಕರನ್ನು ಕರೆದು ನಾನು ಮಠದಲ್ಲಿ ಸನ್ಮಾನ ಮಾಡಿಲ್ಲ. ಹಣ ಕೊಡು ಎಂದು ಯಾರ ಬಳಿ ಕೈವೊಡ್ಡಿ ಬೇಡಿಲ್ಲ. ನಮ್ಮ ಸಾನಿಧ್ಯ ಹೇಗೆ ಇರಬೇಕೆಂದರೆ ರಾಜಕಾರಣಿಗಳಿಗೆ ಆಶೀರ್ವಾದ ಮಾಡಬೇಕು. ಸಮಾಜವನ್ನು ತಿದ್ದಿ ಶುದ್ಧವಾಗಿ ಬದುಕು ಮಾಡುವಂತೆ ನಾವು ಸರಿಯಾಗಿ ಕಲಿಸಬೇಕು. ಅವರಿಂದ ದಕ್ಷಿಣೆ ಬಯಸುವ ಸ್ವಾಮೀಜಿಗಳು ನಾವಾಗಬಾರದು ಎಂದು ಬೇಸರ ಹೊರಹಾಕಿದ್ದಾರೆ.








