ನವದೆಹಲಿ : ಒಂದು ತಿಂಗಳ ಕಾಲ ನಡೆಯುಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಪಹಲ್ಗಾಂ ದಾಳಿಯ ಬಳಿಕದ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಒಂದೆಡೆ ಪಹಲ್ಗಾಂ ದಾಳಿ, ಬಳಿಕದ ಅಪರೇಷನ್ ಸಿಂದೂರ, ಭಾರತ- ಪಾಕ್ ಯುದ್ಧ ಸ್ಥಗಿತ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ, ಇತ್ತೀಚಿನ ಏರಿಂಡಿಯಾ ವಿಮಾನ ಪತನ, ಬಿಹಾರದಲ್ಲಿನ ವಿಶೇಷ ಮತಪಟ್ಟಿ ಪರಿಷ್ಕರಣೆ ಮೊದಲಾದ ವಿಷಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
ಇನ್ನೊಂದೆಡೆ ಸರ್ಕಾರ ಕೂಡಾ ಪ್ರತಿಪಕ್ಷಗಳನ್ನು ಹಣಿಸಲು ತನ್ನದೇ ಆದ ಪ್ರತಿತಂತ್ರ ರೂಪಿಸಿದೆ. ಮೇಲ್ಕಂಡ ವಿಷಯಗಳ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉತ್ತರಕ್ಕೆ ವಿಪಕ್ಷಗಳು ಪಟ್ಟುಹಿಡಿಯುವ ಸಾಧ್ಯತೆ ಇದೆಯಾದರೂ, ಮೋದಿ ಉತ್ತರಿಸುವ ಸಾಧ್ಯತೆ ಇಲ್ಲ. ಅವರ ಬದಲಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ಏಟಿಗೆ ಎದಿರೇಟು ನೀಡುವ ಸಾಧ್ಯತೆ ದಟ್ಟವಾಗಿದೆ.
ಸರ್ವಪಕ್ಷ ಸಭೆ
ಈ ನಡುವೆ ಸುಗಮ ಕಲಾಪಕ್ಕೆ ಸಹಕಾರ ಕೋರುವ ನಿಟ್ಟಿನಲ್ಲಿ ಸರ್ಕಾರ, ಭಾನುವಾರ ಸರ್ವಪಕ್ಷ ಸಭೆ ಆಯೋಜಿಸಿತ್ತು. ಅದರಲ್ಲಿ ವಿಪಕ್ಷಗಳು, ಪಹಾಂ, ಸಿಂದೂರ, ಬಿಹಾರ ಮತಪಟ್ಟಿ, ಏರಿಂಡಿಯಾ ಘಟನೆ ಕುರಿತು ವಿಸ್ತ್ರತ ಚರ್ಚೆಗೆ ಒತ್ತಾಯಿಸಿವೆ. ಸರ್ಕಾರ ಕೂಡಾ ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ತಾನು ಸಿದ್ದ ಎಂಬ ಭರವಸೆ ನೀಡಿದೆ. ಜು.21ರಂದು ಆರಂಭವಾಗುವ ಅಧಿವೇಶನ ಆ.21ರವರೆಗೆ ನಡೆಯಲಿದೆ.