ಕಲಬುರ್ಗಿ : ರಾಜ್ಯ ರಾಜಕಾರಣದಲ್ಲಿ ಇತ್ತೀಚಿಗೆ ಹಲವಾರು ಬದಲಾವಣೆಗಳು ನಡೆದಿದ್ದು, 5 ವರ್ಷಗಳ ಕಾಲ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇತ್ತ ಕೆಲವು ಪ್ರಮುಖ ಸಚಿವರು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯ ಶಾಸಕ ಹಾಗು KKRDB ಅಧ್ಯಕ್ಷ ಡಾ.ಅಜೇಯ್ ಸಿಂಗ್ ಅಕ್ಟೋಬರ್ ನಲ್ಲಿ ಸಂಪುಟ ಪುನಾರಚನೆ ಆಗಲಿದ್ದು, ನನಗೆ ಈ ಬಾರಿ ಸಚಿವ ಮಂತ್ರಿ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಸುಂಪುಟ ಪುನಾರಚನೆ ಆಗುತ್ತದೆ. ಈಗಾಗಲೇ ಈ ಬಗ್ಗೆ ಸಿಎಂ ಕೂಡ ಹೇಳಿದ್ದಾರೆ. ಎಷ್ಟು ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈ ಬಾರಿ ನನಗೆ ಮಂತ್ರಿಸ್ಥಾನ ಸಿಕ್ಕೇ ಸಿಗುತ್ತದೆ. ಆ ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯ ಕಾಲದಿಂದಲೂ ಶಾಂತವಾಗಿದ್ದೇವೆ. ನಮ್ಮ ತಂದೆಗೆ ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ಕೊಡು ಅಂದಾಗ ಮರು ಮಾತನಾಡದೆ ಕೊಟ್ಟಿದ್ದರು. ನಾವು ಮೊದಲಿನಿಂದಲೂ ಪಕ್ಷನಿಷ್ಟವಾಗಿದ್ದೇವೆ. ಹೀಗಾಗಿ, ಈ ಬಾರಿ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತೆ. ಇಲ್ಲಿಯವರೆಗೂ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಹೀಗಾಗಿ ಪಕ್ಷ ಮಂತ್ರಿ ಸ್ಥಾನ ನೀಡುತ್ತೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.