ಮಂಗಳೂರು : ದೇಶಾದ್ಯಂತ ಸಿರಿವಂತ ಉದ್ಯಮಿಗಳನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರಿಂದ ಕೋಟ್ಯಂತರ ಹಣ ಲಪಟಾಯಿಸುತ್ತಿದ್ದ ಆರೋಪಿ ರೋಶನ್ ಸಲ್ಡಾನ್ ವಿರುದ್ಧ ಬಿಹಾರ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ರೋಶನ್ ಸಲ್ಡಾನ್ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಒಟ್ಟು ಐವರು ಉದ್ಯಮಿಗಳು ರೋಶನ್ ಸಲ್ಡಾನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನಗೆ 1 ಕೋಟಿ ರೂ. ವಂಚನೆ ಮಾಡಿರುವುದಾಗಿ ಆರೋಪಿಸಿ ರೋಶನ್ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ಮಹಾರಾಷ್ಟ್ರದ ಉದ್ಯಮಿಯೊಬ್ಬರು 5 ಕೋಟಿ ರೂ. ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ. ಹಣವನ್ನು ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ವರ್ಗಾಯಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಂಧ್ರಮೂಲದ ಉದ್ಯಮಿಗೆ 4 ಕೋಟಿ ವಂಚಿಸಿರುವ ಬಗ್ಗೆ ಆರೋಪಿ ವಿರುದ್ಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗಾಗಿ ರೋಶನ್ ಸಲ್ಡಾನ್ ತನಗೆ ಭೂಮಿ ಖರೀದಿ ವಿಚಾರದಲ್ಲಿ 10 ಕೋಟಿಗೂ ಅಧಿಕ ಮೋಸ ಮಾಡಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. 10 ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ ಅದನ್ನು ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.