ಬೆಂಗಳೂರು : ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಹಿಂಬದಿಯಿಂದ ಒದ್ದು ವಿಕೃತಿ ಮೆರೆದಿದ್ದ ಆರೋಪಿಯನ್ನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 14 ರಂದು ತ್ಯಾಗರಾಜನಗರದಲ್ಲಿ ಘಟನೆ ನಡೆದಿದ್ದು, ರಂಜನ್ ಎಂಬ ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜ್ಜಿ ಮನೆಗೆ ಬಂದಿದ್ದ ಬಾಲಕ ನೀವ್ ಜೈನ್ ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಆಟವಾಡುತ್ತಿದ್ದ. ಈ ವೇಳೆ ಹಿಂದಿನಿಂದ ಬಂದಿದ್ದ ರಂಜನ್ ಜಾಡಿಸಿ ಒದ್ದಿದ್ದರಿಂದ ಬಾಲಕ ಮುಗ್ಗರಿಸಿ ಬಿದ್ದಿದ್ದ. ಆರೋಪಿಯ ಕುಕೃತ್ಯದಿಂದ ನೆಲಕ್ಕೆ ಬಿದ್ದ ಬಾಲಕನಿಗೆ ತರಚಿದ ಗಾಯಗಳಾಗಿದ್ದವು. ಆರೋಪಿಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಠಾಣೆ ಪೊಲೀಸರು ಆರೋಪಿ ರಂಜನ್ನನ್ನು ಬಂಧಿಸಿದ್ದಾರೆ.







