ಉತ್ತರಕನ್ನಡ : ರಾಜ್ಯದಲ್ಲಿ ಗೌರವದ ದುರಂತ ಒಂದು ಸಂಭವಿಸಿದ್ದು ಮನೆ ಮುಂದೆ ಆಟ ಆಡುತ್ತಿದ್ದಾಗ ಆಕಸ್ಮಿಕವಾಗಿ ಎರಡು ವರ್ಷದ ಮಗುವೊಂದು ಐವತ್ತು ಅಡಿ ಆಳದ ಬಾವಿಗೆ ಬಿದ್ದಿದೆ ಈ ವೇಳೆ ವ್ಯಕ್ತಿ ಒಬ್ಬ ತನ್ನ ಪ್ರಾಣವನ್ನು ಲೆಕ್ಕಿಸದೆ 50 ಅಡಿ ಆಳದ ಬಾವಿಗೆ ಇಳಿದು ಎರಡು ವರ್ಷದ ಮಗು ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಸ್ತೂರಬಾ ನಗರದ ನಿವಾಸಿಯಾದ ಭುವಿ ಎಂಬ ಎರಡು ವರ್ಷದ ಮಗು ಸೋಮವಾರ ಮಧ್ಯಾಹ್ನ ಎಂದಿನಂತೆ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಮನೆಯವರೆಲ್ಲರೂ ಕೆಲಸದಲ್ಲಿ ಮಗ್ನರಾಗಿದ್ದಾಗ, ಮಗು ಆಟವಾಡುತ್ತಾ ಮುಂಭಾಗದಲ್ಲಿದ್ದ ತೆರೆದ ಬಾವಿಗೆ ಬಿದ್ದಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಮನೆಯವರು ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಬಂದಾಗ ಬೆಚ್ಚಿ ಬಿದ್ದಿದ್ದಾರೆ.
ಮಗು ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಪಯ್ಯು ಚವಟಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಸುಮಾರು 50 ಅಡಿ ಆಳವಿದ್ದ ಕಗ್ಗತ್ತಲ ಬಾವಿಗೆ ಹಗ್ಗದ ಸಹಾಯದಿಂದ ಪ್ರಾಣದ ಹಂಗು ತೊರೆದು ಇಳಿದಿದ್ದಾರೆ. ಬಾವಿಯ ಒಳಗಿದ್ದ ಮೋಟಾರ್ ಪೈಪ್‌ಗೆ ಮಗುವಿನ ಬಟ್ಟೆ ಸಿಲುಕಿಕೊಂಡಿದ್ದರಿಂದ, ಮಗು ನೀರಿನಲ್ಲಿ ಮುಳುಗದೇ ಪೈಪ್ ಆಸರೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಾವಿನೊಂದಿಗೆ ಹೋರಾಡುತ್ತಿತ್ತು. ಪಯ್ಯ ಅವರು ಜಾಗರೂಕತೆಯಿಂದ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ.
ಅಷ್ಟು ಎತ್ತರದಿಂದ ಬಿದ್ದಿದ್ದರೂ ಮಗುವಿಗೆ ಸಣ್ಣ ಗಾಯವೂ ಆಗದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಗು ಸುರಕ್ಷಿತವಾಗಿ ಮೇಲೆ ಬರುತ್ತಿದ್ದಂತೆಯೇ ಅಜ್ಜಿ ಜಯಮ್ಮ ಹಾಗೂ ಕುಟುಂಬಸ್ಥರು ಭಾವುಕರಾಗಿ ಕಣ್ಣೀರು ಹಾಕಿದರು. ಮಗುವನ್ನು ರಕ್ಷಿಸಿದ ಪಯ್ಯ ಚವಟಿ ಅವರ ಸಾಹಸಕ್ಕೆ ಇಡೀ ನಗರದಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.








