ಬೆಂಗಳೂರು : ಕರ್ನಾಟಕದಲ್ಲಿ ಮರ್ಯಾದಾ ಹತ್ಯೆಗಳನ್ನು (Honor Killings) ತಡೆಗಟ್ಟಲು ರಾಜ್ಯ ಸರ್ಕಾರವು “ಇವ ನಮ್ಮವ, ಇವ ನಮ್ಮವ” ಎಂಬ ಹೊಸ ಕಠಿಣ ಮಸೂದೆಗೆ ಒಪ್ಪಿಗೆ ನೀಡಿದೆ. ಈ ಮೂಲಕ ಜಾತಿ, ಅಂತರ್ಜಾತಿ ವಿವಾಹದ ಹೆಸರಿನಲ್ಲಿ ನಡೆಯುವ ಕೊಲೆಗಳಿಗೆ ಕಡಿವಾಣ ಹಾಕಲು ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡಲು ಸರ್ಕಾರ ಕಾನೂನು ರೂಪಿಸುತ್ತಿದೆ.
ಹೌದು ಇಂದು ವಿಧಾನಸಭಾದಲ್ಲಿ ಇವನ ನಮ್ಮವ ಇವ ನಮ್ಮವ ವಿಧೇಯಕ ಮಂಡನೆ ಮಾಡಲಾಯಿತು. ಅಂತರ ಜಾತಿ ವಿವಾಹಕ್ಕೆ ಮಾನ್ಯತೆ ನೀಡುವ ವಿಧೇಯಕ ಇದಾಗಿದ್ದು ಹಲ್ಲೆ ದೌರ್ಜನ್ಯ ತಡೆಗಟ್ಟುವ ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಂಡಿಸಿದರು.
ಈ ಮಸೂದೆ ಮೂಲಕ ವ್ಯಕ್ತಿಗಳಿಗೆ ತಮ್ಮ ಇಚ್ಛೆಯಂತೆ ವಿವಾಹವಾಗುವ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುವುದು, ಜಾತಿ ಆಧಾರಿತ ಅಪರಾಧಗಳನ್ನು ತಡೆಯುವುದು, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸುವುದು ಮತ್ತು ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡುವ ವ್ಯವಸ್ಥೆ ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ. ಜೊತೆಗೆ ಅಂತರ್ಜಾತಿ ವಿವಾಹಗಳನ್ನು ನೆರವೇರಿಸಲು ‘ಇವ ನಮ್ಮವ ಇವ ನಮ್ಮವ ವೇದಿಕೆ’ ಸ್ಥಾಪಿಸಲು ಮಸೂದೆಯಲ್ಲಿ ನಿಯಮ ರೂಪಿಸಲಾಗಿದೆ.
ರಾಜ್ಯದಲ್ಲಿ ಇನ್ನೂ ಜಾತಿ ಆಧಾರಿತ ಭೇದಭಾವ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮುಂದುವರಿದಿದೆ. ಅಂತರ್ಜಾತಿ ವಿವಾಹ ಮಾಡಿಕೊಂಡವರ ಮೇಲೆ ಹಲ್ಲೆ, ಬೆದರಿಕೆ, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ, ಕೊಲೆ, ಕಿರುಕುಳ ಮತ್ತು ಮಾನಸಿಕ ಹಿಂಸೆ ಪ್ರಕರಣಗಳು ಮರ್ಯಾದೆಯ ಹೆಸರಿನಲ್ಲಿ ವರದಿಯಾಗುತ್ತಿವೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
‘ಇವ ನಮ್ಮವ’ ಕಾಯಿದೆಯ ಪ್ರಮುಖ ಅಂಶಗಳು:
* ಮರ್ಯಾದಾ ಹತ್ಯೆ ನಿಷೇಧ: ಜಾತಿ, ಕುಲ ಅಥವಾ ಸಮುದಾಯದ ಹೆಸರಿನಲ್ಲಿ ದಂಪತಿಗಳು ಅಥವಾ ಪ್ರೇಮಿಗಳ ಮೇಲೆ ನಡೆಯುವ ಹಿಂಸೆ ಮತ್ತು ಕೊಲೆಗಳನ್ನು ತಡೆಯುವುದು.
* ಕಠಿಣ ಶಿಕ್ಷೆ: ಇಂತಹ ಹತ್ಯೆಗಳಲ್ಲಿ ಭಾಗಿಯಾದವರಿಗೆ ಮತ್ತು ಪ್ರಚೋದನೆ ನೀಡಿದವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಬಂಧನೆಗಳು.
* ಜಂಟಿ ಕುಟುಂಬದ ಹೊಣೆಗಾರಿಕೆ: ಇಂತಹ ಪ್ರಕರಣಗಳಲ್ಲಿ ಕುಟುಂಬ ಸದಸ್ಯರ ಹೊಣೆಗಾರಿಕೆಯನ್ನು ನಿಗದಿಪಡಿಸುವುದು.
* ರಕ್ಷಣೆ: ಪ್ರೇಮಿಗಳು ಅಥವಾ ದಂಪತಿಗಳಿಗೆ ಅಗತ್ಯವಿರುವ ರಕ್ಷಣೆ ಒದಗಿಸಲು ಕ್ರಮ.








