ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದೆ.
ಈ ಮೊದಲು 2009 ರಿಂದಲೂ ಮುನಿರತ್ನ ವಿರುದ್ಧ ಹಲವು ಸ್ವರೂಪದ ಪ್ರಕರಣಗಳು ವಿವಿಧ ಹಂತದಲ್ಲಿವೆ. ಬಿಬಿಎಂಪಿಯ ಕಡತಗಳನ್ನು ತಮ ಮನೆಯಲ್ಲಿ ಇಟ್ಟುಕೊಂಡಿರುವುದು, ಕಾಮಗಾರಿಗಳಲ್ಲಿ ನೂರಾರು ಕೋಟಿ ರೂ. ಅಕ್ರಮ ಸೇರಿದಂತೆ ಹಲವು ದೂರುಗಳಿವೆ. ಮುನಿರತ್ನ ಅವರು ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಯಾವ ಹಂತಕ್ಕಾದರೂ ತಲುಪುತ್ತಾರೆ ಎಂಬ ಆರೋಪಗಳಿವೆ.
ಗುತ್ತಿಗೆದಾರ ಚೆಲುವರಾಜು ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಬಳಿಕ ಮುನಿರತ್ನ ಅವರ ಗ್ರಹಚಾರ ಕೆಟ್ಟಂತಾಗಿದೆ. ಜಾತಿನಿಂದನೆ ಸೇರಿದಂತೆ ವಿವಿಧ ಆರೋಪಗಳಡಿ ಬಂಧನಕ್ಕೊಳಗಾಗಿ ಜೈಲುಪಾಲಾಗಿದ್ದಾರೆ. ಅದರ ಬೆನ್ನಲ್ಲೇ ಮಹಿಳೆಯೊಬ್ಬರು ಅತ್ಯಾಚಾರದ ಆರೋಪದಡಿ ದೂರು ದಾಖಲಿಸಿದ್ದಾರೆ. ಹೀಗಾಗಿ ಜಾಮೀನು ದೊರೆತರೂ ಮುನಿರತ್ನ ಮತ್ತೆ ಜೈಲಿನಲ್ಲೇ ಉಳಿಯುವಂತಾಗಿದೆ.