ಬೆಂಗಳೂರು : ರಾಜ್ಯದಲ್ಲಿ ಮಂಗನ ಕಾಯಿಲೆ ತಡೆಗಟ್ಟಲು ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಕುರಿತು ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆ.ಎಫ್.ಡಿ.) ಅಥವಾ ಮಂಗನ ಕಾಯಿಲೆಯು ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಹರಡುವ ವೈರಾಣು ರೋಗವಾಗಿದ್ದು, ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ತಿಂಗಳ ಅವಧಿಯಲ್ಲಿ ಕಂಡುಬರುತ್ತದೆ. ಪ್ರಸ್ತುತ, ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಾಗಲಿ ಲಸಿಕೆಯಾಗಲಿ ಲಭ್ಯವಿರುವುದಿಲ್ಲ. ಈ ಹಿನ್ನಲೆಯಲ್ಲಿ, ರೋಗವನ್ನು ತಡೆಗಟ್ಟುವುದು ಮತ್ತು ರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಸಂಭವನೀಯ ಮರಣಗಳನ್ನು ತಡೆಗಟ್ಟುವುದು ಅತ್ಯಂತ ಅವಶ್ಯಕವಾಗಿದ್ದು, ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಕೈಗೊಳ್ಳಬೇಕಾದ ಕ್ರಮಗಳು
1. ಮಂಗಗಳ ಅಸಾಮಾನ್ಯ ಸಾವಿನ ಘಟನೆಗಳು ಕೆಎಫ್‌ಡಿ ಹರಡುವಿಕೆಯ ಪ್ರಾಥಮಿಕ ಸೂಚಕಗಳಾಗಿರುವುದರಿಂದ, ಸಮುದಾಯ ಹಾಗೂ ಅರಣ್ಯ ಸಿಬ್ಬಂದಿಗಳಿಂದ ಮಂಗಗಳ ಸಾವಿನ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು. ಇದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆ ಮತ್ತು ಗ್ರಾಮ ಮಟ್ಟದಲ್ಲಿ ಸಮುದಾಯದೊಂದಿಗೆ ಸಂವಹನ ನಡೆಸಿ ನೈಜ ಸಮಯದಲ್ಲಿ (real time) ಮಂಗಗಳ ಸಾವಿನ ವರದಿಯು ಲಭ್ಯವಾಗುವಂತೆ ಕ್ರಮವಹಿಸುವುದು.
2. ಮಂಗಗಳ ಅಸಾಮಾನ್ಯ ಸಾವು ವರದಿಯಾದ 2 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಸಕ್ರಿಯ ಸಮೀಕ್ಷೆಯನ್ನು ಕನಿಷ್ಠ 21 ದಿನಗಳವರೆಗೆ ಕೈಗೊಳ್ಳುವುದು.
3. ಎಲ್ಲಾ ಸಂಶಯಾಸ್ಪದ ಜ್ವರ ಪ್ರಕರಣಗಳನ್ನು ‘ಪ್ರಕರಣ ವ್ಯಾಖ್ಯಾನ’ದ ಪ್ರಕಾರ ಗುರುತಿಸಿ, ಪರೀಕ್ಷೆಗೆ ಒಳಪಡಿಸುವುದು ಹಾಗೂ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು 24 ಗಂಟೆಯ ಒಳಗೆ VDL ಶಿವಮೊಗ್ಗಕ್ಕೆ ತಲುಪಿಸುವುದು.
4. ಧೃಡಪಟ್ಟ ಮಾನವ ಕೆಎಫ್‌ಡಿ ಪ್ರಕರಣ ವರದಿಯಾದ ಸಂದರ್ಭದಲ್ಲಿ, ಪ್ರಕರಣ ವರದಿಯಾದ ಸ್ಥಳೀಯ ಪ್ರದೇಶದಲ್ಲಿ ಸಕ್ರಿಯ ಸಮೀಕ್ಷೆಯನ್ನು ಕನಿಷ್ಠ 21 ದಿನಗಳವರೆಗೆ (ಕೊನೆಯ ರೋಗಿಯ ರೋಗಲಕ್ಷಣಗಳು ಪ್ರಾರಂಭವಾದ ದಿನಾಂಕದಿಂದ) ಮುಂದುವರೆಸುವುದು. ಮತ್ತು, ಮಂಗನ ಧೃಡಪಟ್ಟ ಪ್ರಕರಣ ವರದಿಯಾದ ಸಂದರ್ಭದಲ್ಲಿ, ಪ್ರಕರಣ ವರದಿಯಾದ ಸ್ಥಳದ 5 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಸಕ್ರಿಯ ಸಮೀಕ್ಷೆಯನ್ನು ತಕ್ಷಣವೇ ಪ್ರಾರಂಭಿಸಿ, ಪ್ರಸ್ತುತ ರೋಗಪ್ರಸರಣದ ಅವಧಿ ಮುಗಿಯುವವರೆಗೂ (ಸಾಮಾನ್ಯವಾಗಿ ಮೇ/ಜೂನ್‌ವರೆಗೆ) ಮುಂದುವರೆಸುವುದು.
5. ಎಲ್ಲಾ KFD ಧೃಡೀಕೃತ ಪ್ರಕರಣಗಳನ್ನು ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯವಾಗಿದ್ದು, ರೋಗ ಪ್ರಸರಣದ ಅವಧಿಯಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ KFD ಮೀಸಲು ವಾರ್ಡನ್ನು ತೆರೆಯುವುದು. ಅಲ್ಲದೆ, ಕೆ.ಎಂ.ಸಿ. ಮಣಿಪಾಲ, SIMS ಶಿವಮೊಗ್ಗ, KRIMS ಕಾರವಾರ ಆಸ್ಪತ್ರೆಗಳನ್ನು ರೆಫರಲ್ ಆಸ್ಪತ್ರೆಗಳನ್ನಾಗಿ ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಡಮಾಡದೆ ರೋಗಿಗಳನ್ನು ಹತ್ತಿರದ ರೆಫರಲ್ ಕೇಂದ್ರಕ್ಕೆ ಸಾಗಿಸಿ ಮರಣ ಸಂಭವಿಸದಂತೆ ತಡೆಗಟ್ಟುವುದು.
6. ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ ಅಥವಾ ರೆಫರಲ್ ಕೇಂದ್ರಕ್ಕೆ ಸಾಗಿಸಲು ಅಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವುದು.
7. ಮಂಗ ಸತ್ತ ಪ್ರದೇಶದ 50-ಮೀಟರ್ ವ್ಯಾಪ್ತಿಯಲ್ಲಿ (ಹಾಟ್‌ಸ್ಪಾಟ್) ಭಾರತ ಸರ್ಕಾರದ ಮಾರ್ಗದರ್ಶಿಯಂತೆ (ಲಗತ್ತಿಸಿದೆ) ಮೆಲಾಥಿಯಾನ್ ಬದಲಿಗೆ, ಡೆಲ್ಟಾಮೆಥಿನ್ 2.5% WP, ಸೈಫೋಥಿನ್ 10% WP, ಲ್ಯಾಂಬ್ಯಾಸೈಹ್ಯಾಲೋಥ್ವಿನ್ 10% WP, ಆಲ್ಫಾಸೈಪರ್‌ಮೆಥಿನ್ 5% WP ಮತ್ತು ಬೈಫೆಂದ್ರಿನ್ 10% WP ಇವುಗಳಲ್ಲಿ ಯಾವುದಾದರೂ ಕೀಟನಾಶಕವನ್ನು ಬಳಸುವುದು.
8. ಎಲ್ಲಾ ಕೆಎಫ್‌ಡಿ ಪೀಡಿತ ಜಿಲ್ಲೆಗಳಲ್ಲಿ ಉಣ್ಣೆಗಳ ಸಮೀಕ್ಷೆಯನ್ನು ನಿಯಮಿತವಾಗಿ ಕೈಗೊಂಡು ಹದಿನೈದು ದಿನಗಳಿಗೊಮ್ಮೆ ವರದಿಯನ್ನು ಸಲ್ಲಿಸುವುದು. ಮುಂದುವರೆದು, ಈ ನಿರ್ದೇಶನಾಲಯದಿಂದ ಹೊರಡಿಸಲಾದ ಪ.ಸಂ. ಡಿಡಿ-ಎಸ್.ಎಸ್.ಯು-ಸಿಎಂಡಿ/13/2025-26 ದಿ: 05-06-2025 ರ SOP ಪ್ರಕಾರ ಎಂಟಮಾಲಜಿಸ್ಟರವರು ಉಣ್ಣೆಗಳ ಸಮೀಕ್ಷೆ ಕೈಗೊಂಡು ಸೂಚ್ಯಾಂಕಗಳನ್ನು ವಿಶ್ಲೇಷಿಸಿ ಅದರಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಶಿಫಾರಸ್ಸು ಮಾಡುವುದು.
9. ಉಣ್ಣೆಗಳ ಮಾದರಿಗಳನ್ನು ವೈರಾಣುವಿನ ಪತ್ತೆಗಾಗಿ ವಿಡಿಎಲ್ ಮೂಲಕ NIV ಪೂನಾಗೆ ಕಳುಹಿಸುವುದು.
10. ಪಶುವೈದ್ಯರು ಸತ್ತ ಮಂಗಗಳ ಶವಪರೀಕ್ಷೆಯನ್ನು ತಪ್ಪದೆ ಕೈಗೊಳ್ಳುವಂತೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಗಳಲ್ಲಿ ತೀರ್ಮಾನ ಹೊರಡಿಸುವುದು. ಹಾಗು ಮಂಗನ ಮಾದರಿಗಳನ್ನು ವೈರಾಣು ಪತ್ತೆಗೆ ವಿಡಿಎಲ್ ಮೂಲಕ NIV ಪೂನಾಗೆ ಕಳುಹಿಸುವುದು.
11. ರೋಗ ನಿರ್ವಹಣೆಗೆ ಅಗತ್ಯವಾದ ಔಷಧಿಗಳು ಎಲ್ಲಾ ಚಿಕಿತ್ಸಾ ಕೇಂದ್ರಗಳಲ್ಲಿ ಮತ್ತು ಉಣ್ಣೆ ವಿಕರ್ಷಕಗಳು ಸಾಕಷ್ಟು ಪ್ರಮಾಣದಲ್ಲಿ ಪ್ರಾ.ಆ.ಕೇ ಗಳಲ್ಲಿ ಲಭ್ಯವಿರತಕ್ಕದ್ದು.
12. ಸಾರ್ವಜನಿಕರಿಗೆ ರೋಗ ಲಕ್ಷಣಗಳು, ಹರಡುವಿಕೆ, ತಡೆಗಟ್ಟುವಿಕೆ ಕುರಿತಾಗಿ ಐಇಸಿ/ಬಿಸಿಸಿ ಚಟುವಟಿಕೆಗಳನ್ನು ತೀವ್ರಗೊಳಿಸುವುದು ಮತ್ತು ಕೆಎಫ್‌ಡಿ ಚಿಕಿತ್ಸೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂಬ ಮಾಹಿತಿಯು ಸಹ ಸಾರ್ವಜನಿಕರಿಗೆ ಲಭ್ಯವಾಗತಕ್ಕದ್ದು.
13. ಎಲ್ಲಾ ಜಿಲ್ಲೆಗಳಲ್ಲಿ ಅಂತರ ಇಲಾಖಾ ಸಮನ್ವಯ ಸಭೆಗಳನ್ನು ನಡೆಸಿ, ರೋಗ ನಿಯಂತ್ರಣಕ್ಕೆ ಸಹಕಾರ ಪಡೆಯುವುದು ಹಾಗೂ RRT ತಂಡಗಳನ್ನು ಸನ್ನದ್ದುಗೊಳಿಸುವುದು.
14. ಪ್ರಕರಣಗಳನ್ನು IHIP portal ನಲ್ಲಿ ಕಡ್ಡಾಯವಾಗಿ ವರದಿ ಮಾಡುವುದು. ಉಪ ಕೇಂದ್ರ ಮಟ್ಟದಲ್ಲಿ S-form, ಆರೋಗ್ಯ ಸಂಸ್ಥೆಯ ಮಟ್ಟದಲ್ಲಿ P-form ಹಾಗು ಮಾದರಿಗಳ ಪರೀಕ್ಷಾ ಅಂಕಿ ಅಂಶಗಳನ್ನು L-form ನಲ್ಲಿ ನಮೂದಿಸುವುದು. ಮರಣ ಪ್ರಕರಣಗಳ ಆಡಿಟ್ ನಡೆಸಿ ತಕ್ಷಣವೇ ವರದಿ ಸಲ್ಲಿಸುವುದು.
15. ಮಾನವ, ಮಂಗ ಮತ್ತು ಉಣ್ಣೆಗಳ ಮಾಹಿತಿಯನ್ನೊಳಗೊಂಡ ದೈನಂದಿನ ವರದಿಯನ್ನು VDL ಶಿವಮೊಗ್ಗ ಇವರು ತಯಾರಿಸಿ, ಸಂಬಂದಿಸಿದ ಜಿಲ್ಲೆಗಳು ಮತ್ತು ಆಯುಕ್ತಾಲಯಕ್ಕೆ ಸಲ್ಲಿಸುವುದು.









