ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು /ನೌಕರರು ಅಧಿಕೃತ ಪ್ರಯಾಣ ಸಂಬಂಧ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(MSIL) ನಿಂದ ಖರೀದಿಸಲಾದ ಪ್ರಯಾಣ ಟಿಕೆಟ್ಗಳ ಮೊತ್ತವನ್ನು ಖಜಾನೆ-2 ರ ಮೂಲಕ ಪಾವತಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ(1) ರಲ್ಲಿ ಓದಲಾದಂತೆ ಕರ್ನಾಟಕ ಆರ್ಥಿಕ ಸಂಹಿತೆ 1958, ಅನುಚ್ಛೇದ 137ರ ಪ್ರಕಾರ ಪ್ರಯಾಣ ಭತ್ಯೆಯನ್ನು “Pay bill” ನಲ್ಲಿ ಸೆಳೆದು ಸರ್ಕಾರಿ ನೌಕರರ/ಅಧಿಕಾರಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಮೇಲೆ (2) ರಲ್ಲಿ ಓದಲಾದ ಕಡತದಲ್ಲಿ, ಅಡ್ವಕೇಟ್ ಜನರಲ್ ಹಾಗೂ ಹೆಚ್ಚುವರಿ ಅಡ್ವಕೇಟ್ ಜನರಲ್ರವರು ಕೈಗೊಳ್ಳುವ ಪ್ರವಾಸಕ್ಕೆ ಟ್ರಾವೆಲ್ ಏಜೆನ್ಸಿಯವರಿಂದ ಖರೀದಿಸಲಾದ ಪ್ರಯಾಣ ಟಿಕೇಟ್ಗಳ ಮೊತ್ತವನ್ನು ಖಜಾನೆಯಿಂದ ಪಾವತಿ ಪಡೆದ ಮೇಲೆ ಟ್ರಾವೆಲ್ ಏಜೆನ್ಸಿಗೆ ಚೆಕ್ ಅಥವಾ ಡಿ.ಡಿ. ಮೂಲಕ ಪಾವತಿಸಿದಲ್ಲಿ ವಿಳಂಬವಾಗಿ, ಮುಂದೆ ತುರ್ತು ಸಂದರ್ಭದಲ್ಲಿ ಟ್ರಾವೆಲ್ ಏಜೆನ್ಸಿರವರು ಟಿಕೆಟ್ ಕಾದಿರಿಸಲು ನಿರಾಕರಿಸುವ ಸಂಭವವಿರುವುದರಿಂದ, ಟ್ರಾವೆಲ್ ಏಜೆನ್ಸಿರವರಿಗೆ ಟಿಕೆಟ್ ಮೊತ್ತವನ್ನು ನೇರವಾಗಿ ಖಜಾನೆ-2ರ ಮೂಲಕ ಪಾವತಿಸುವಂತೆ ಸೂಚನೆಗಳನ್ನು ನೀಡಲು ಕೋರಿರುತ್ತಾರೆ.
ಮೇಲೆ(3) ರಲ್ಲಿ ಓದಲಾದ ಸುತ್ತೋಲೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಅಧಿಕೃತ ಪ್ರಯಾಣ ಮಾಡುವಾಗ ವಿಮಾನಯಾನದ ಟಿಕೆಟ್ಗಳನ್ನು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಅಥವಾ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯ ವೆಬ್ಸೈಟ್ ನಿಂದ ಮಾತ್ರ ಖರೀದಿಸುವಂತೆ ಸೂಚಿಸಲಾಗಿದೆ.
ಆದ್ದರಿಂದ, ಪ್ರಯಾಣದ ಟಿಕೇಟ್ಗಳ ಮೊತ್ತವನ್ನು ಖಜಾನೆ-2 ರ ಮೂಲಕ ನೇರವಾಗಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ರವರಿಗೆ ಪಾವತಿಸುವ ಸಲುವಾಗಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
1. ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಅಧಿಕೃತ ಪ್ರಯಾಣ ಸಂಬಂಧ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ನಿಂದ ಖರೀದಿಸಿದ ಪ್ರಯಾಣ ಟಿಕೆಟ್ಗಳ ದರವನ್ನು ನೇರವಾಗಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಗೆ ಪಾವತಿಸುವ ಸಲುವಾಗಿ, ಪ್ರಯಾಣಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಪ್ಲೇಮಿನೊಂದಿಗೆ “ಪ್ರಯಾಣದ ಟಿಕೆಟ್ ನ ಮೊತ್ತವನ್ನು ನೇರವಾಗಿ ಟ್ರಾವೆಲ್ ಏಜೆನ್ಸಿಗೆ ಪಾವತಿಸುವುದು ಹಾಗೂ ಆ ರೀತಿ ಪಾವತಿಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ” ಎಂಬ ದೃಢೀಕರಣವನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪ್ರಯಾಣದ ಬಿಲ್ಲನ್ನು ಖಜಾನೆಗೆ ಸಲ್ಲಿಸುವ ಅಧಿಕಾರಿಗಳು, ಟ್ರಾವೆಲ್ ಏಜೆನ್ಸಿಯನ್ನು ಖಜಾನೆಯಲ್ಲಿ “Recipient ID” ಯಾಗಿ ಸೃಜಿಸಿ, ಪ್ರಯಾಣದ ಟಿಕೆಟ್ ದರವನ್ನು ಖಜಾನೆ-2 ರ ಮೂಲಕ ನೇರವಾಗಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಗೆ ಪಾವತಿಸಲು ಮಂಜೂರಾತಿ ನೀಡಿದೆ.
2. ಇನ್ನಿತರೆ ದಿನಭತ್ಯೆ ಮುಂತಾದವುಗಳನ್ನು ನೌಕರನ/ಅಧಿಕಾರಿಯ ಬ್ಯಾಂಕ್ ಖಾತೆಗೆ ಹಿಂದಿನಂತೆಯೇ ಜಮೆ ಮಾಡಬಹುದಾಗಿದೆ.
3. ಪ್ರಯಾಣ ಟಿಕೆಟ್ ಖರೀದಿಸುವಾಗ ಈ ಸಂಬಂಧ ಸಿ.ಆ.ಸು ಇಲಾಖೆ ಹೊರಡಿಸಿರುವ ಸುತ್ತೋಲೆ ಸಂ: ಸಿಆಸುಇ 45 ಹೆಚ್ಜಿಜಿ 2021, ದಿನಾಂಕ:05.07.2021 ಹಾಗೂ ದಿನಾಂಕ:24.08.2021 ರಲ್ಲಿ ನೀಡಿರುವ ಸೂಚನೆಗಳನ್ನು ಅಧಿಕಾರಿಗಳು ಪಾಲಿಸತಕ್ಕದ್ದು.
4. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ, ಪ್ರಯಾಣ ಮಾಡುವ ಅಧಿಕಾರಿಯಿಂದ ಚೆಕ್ ಮೂಲಕ ಪಾವತಿಯಾಗದೆ ಖಜಾನೆಯಿಂದ ನೇರವಾಗಿ ಪಾವತಿಯಾಗುವುದರಿಂದ, ಸ್ವೀಕರಿಸುವ ಮೊತ್ತವು ಯಾವ ಟಿಕೆಟ್ ಗೆ ಸಂಬಂಧಿಸಿದೆ ಎಂಬುದು ತಿಳಿಯದಿರುವುದರಿಂದ, ಸಂಬಂಧಪಟ್ಟ DDO ರವರು ಪ್ರತಿ ತಿಂಗಳು ತಾವು ತೀರ್ಣಗೊಳಿಸಿದ ಪ್ರಯಾಣ ಭತ್ಯೆ ಬಿಲ್ಲಿನ UTR ಸಂಖ್ಯೆ, ಪ್ರಯಾಣಿಸಿದ ಅಧಿಕಾರಿ ಹೆಸರು, ಪ್ರಯಾಣದ ದಿನಾಂಕ ಮುಂತಾದ ವಿವರಗಳನ್ನು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ ಕಳುಹಿಸುವುದು.