ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನೂಕುನುಗ್ಗಲಿನಲ್ಲಿ 11 ಜನರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಒಂದೇ ಒಂದು ಎಫ್ ಐಆರ್ ದಾಖಲಾಗಿಲ್ಲ.
ಇಷ್ಟೊಂದು ದೊಡ್ಡ ಮಟ್ಟದ ದುರಂತ ಸಂಭವಿಸಿದ್ದರೂ ಈವರೆಗೆ ಒಂದೇ ಒಂದು ಎಫ್ಐಆರ್ ಕೂಡ ದಾಖಲಾಗಿಲ್ಲ. ಘಟನೆಯನ್ನು ಕೇವಲ ಅಸಹಜ ಸಾವು (UDR) ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹನ್ನೊಂದು ಯುಡಿಆರ್ ದಾಖಲಾಗಿವೆ. ದುರ್ಘಟನೆಯಿಂದ ಆಗಿರುವ ಸಾವು ಹಾಗೂ ಇತರ ಯಾವುದೇ ವಿಚಾರಕ್ಕೆ ಕೇಸ್ ದಾಖಲು ಮಾಡಿಲ್ಲ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ರೀಡಾಂಗಣದ ಹೊರಗೆ ಜನಸಂದಣಿ ಹೆಚ್ಚಾಗಿದ್ದರಿಂದ ದುರಂತ ಸಂಭವಿಸಿತು. ಉಚಿತ ಪಾಸ್ಗಳು, ಜನದಟ್ಟಣೆ ಮತ್ತು ಕ್ರೀಡಾಂಗಣದಲ್ಲಿ ಸೀಮಿತ ಆಸನಗಳ ಕೊರತೆಯಿಂದಾಗಿ ಈ ಭೀಕರ ಘಟನೆ ಸಂಭವಿಸಿದೆ ಎಂದು ಯುಡಿಆರ್ ದಾಖಲಾಗಿದೆ.
ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿ ಆರ್ ಸಿ ಬಿ ಚಾಂಪಿಯನ್ಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 33 ಜನರು ಗಾಯಗೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತಕ್ಕೆ ಆರ್ಸಿಬಿ-ಕೆಎಸ್ಸಿಎ ಆಘಾತ ವ್ಯಕ್ತಪಡಿಸಿದ್ದು, ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.