ಬೆಂಗಳೂರು : ರಾಜ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ 60% ಕಮಿಷನ್ ಆರೋಪ ಮಾಡಿರುವ ವಿಚಾರವಾಗಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಉಪಚುನಾವಣೆಗೆ ಪುತ್ರನನ್ನು ನಿಲ್ಲಿಸಿದಾಗ 100 ಕೋಟಿ ಖರ್ಚು ಮಾಡಿದರು. 100 ಕೋಟಿ ಹಣವನ್ನು ಆಲುಗಡ್ಡೆ ಬೆಳೆದು ಸಂಪಾದನೆ ಮಾಡಿದ್ರಾ? ಎಂದು ಬೆಂಗಳೂರಿನಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಸ್ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನೀವು ನಿಂತಾಗ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿದ್ರಿ. ರಾಮನಗರದಲ್ಲೂ ಕೂಡ ಸ್ಪರ್ಧಿಸಿದಾಗ ಕೋಟ್ಯಾಂತರ ಹಣ ಖರ್ಚು ಮಾಡಿದ್ರಿ. ಎಲ್ಲಿಂದ ಬಂತು ಅಷ್ಟು ಹಣ? ಮೊದಲು ಅದನ್ನು ಹೇಳಿ ಎಂದು ಸೋಮಶೇಖರ್ HD ಕುಮಾರಸ್ವಾಮಿಗೆ ಸವಾಲು ಹಾಕಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯಕ್ಕೆ ತೆಗೆದುಕೊಂಡು ಬನ್ನಿ. ವಾರಕ್ಕೆ ಒಂದು ದಿನ ಇಲ್ಲಿಗೆ ಬಂದು ಸುದ್ದಿಗೋಷ್ಠಿ ನಡೆಸಿ ಹೋಗುವುದಲ್ಲ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸುಮ್ಮನೆ ಆರೋಪ ಮಾಡುವುದಲ್ಲ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.