ಬೆಂಗಳೂರು : ಕಾನೂನುಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿದ್ದ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮೂಲಕ ಫೇಮಸ್ ಆದ ಸೋನುಶ್ರೀನಿವಾಸಗೌಡ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜಾಮೀನು ಷರತ್ತು ಪೂರೈಸಿದ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇಂದು ಜಾಮೀನು ಅರ್ಜಿಯ ಷರತ್ತುಗಳನ್ನ ಪೂರೈಸಿದ ಹಿನ್ನೆಲೆ 8:10 ರ ಸುಮಾರಿಗೆ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಇತ್ತ ಬಿಡುಗಡೆಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಸೋನು ಶ್ರೀನಿವಾಸಗೌಡ ತೆರಳಿದ್ದಾರೆ.
ಘಟನೆ ಹಿನ್ನೆಲೆ?
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಇತ್ತೀಚಿಗೆ ಕಾನೂನು ಬಾಹಿರವಾಗಿ ಅವರು ಮಗುವನ್ನು ದತ್ತು ಪಡೆದಿದ್ದರು. ಈ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಮಗುವಿನ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕೆಲವು ತಿಂಗಳ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರು ಹೆಣ್ಣು ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಅವರು ದತ್ತು ಪ್ರಕ್ರಿಯೆಯ ಕಾನೂನನ್ನು ಪಾಲಿಸಿಲ್ಲ ಎಂಬುದು ತಿಳಿದು ಬಂದ ಬಳಿಕ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಸೋನು ಗೌಡ ಅವರನ್ನು ಪೊಲೀಸರು ಬಂಧಿಸಿದರು. 7 ವರ್ಷದ ಬಾಲಕಿಯ ಜೊತೆ ಸೋನು ಗೌಡ ಅವರು ಫೋಟೋ ತೆಗೆದುಕೊಂಡು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಬಾಲಕಿ ಜೊತೆ ಅವರು ಮಂತ್ರಾಲಯಕ್ಕೂ ಹೋಗಿ ಬಂದಿದ್ದರು.