ಹುಬ್ಬಳ್ಳಿ : ರಾಜ್ಯದ ಮೂರೂ ಕ್ಷೇತ್ರಗಳ ಉಪಚುನಾವಣೆ ಇದೆ ನವೆಂಬರ್ 13ರಂದು ನಡೆಯಲಿದ್ದು, ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಈ ಚುನಾವಣೆ ಬಳಿಕ ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಒಂದು ಉಪಚುನಾವಣೆಯ ಬಳಿಕ ಬಿಜೆಪಿ ಹಲವು ಶಾಸಕರು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಹಲವು ಸ್ನೇಹಿತರು ನನ್ನ ಸಂಪರ್ಕದಲ್ಲಿ ಇದ್ದು, ಹೈಕಮಾಂಡ್ ಅವರಿಗೆ ತಿಳಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.
ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆಯ ಗಡುವು ಫಿಕ್ಸ್ ಮಾಡುತ್ತಾ ಹೋಗುತ್ತಾರೆ, ಮುಂದಿನ ಮೂರೂವರೆ ವರ್ಷಗಳ ಕಾಲ ಅವರು ಇದನ್ನೇ ಮಾಡಲಿದ್ದಾರೆ. ನಂತರ ಚುನಾವಣೆ ನಡೆದು ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಇದನ್ನೇ ಮುಂದುವರಿಸಲಿದ್ದಾರೆ ಎಂದು ಸವದಿ ವ್ಯಂಗ್ಯವಾಡಿದರು.