ಉತ್ತರ ಕನ್ನಡ: ತನ್ನ ಮುಗ್ಧ ಮಾತುಗಳು ಹಾಗೂ ವಿಶಿಷ್ಟ ಶೈಲಿಯ ರೀಲ್ಸ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಲಕ್ಷ್ಮಿ ಅಜ್ಜಿ (ಲಕ್ಷ್ಮಿ ಪಟಗಾರ್) ವಿಧಿವಶರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯವರಾದ ಲಕ್ಷ್ಮಿ ಅಜ್ಜಿ ಕಳೆದ ಕೆಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರು, ತಮ್ಮ ಮೊಮ್ಮಗನ ಜೊತೆಗೂಡಿ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ರೀಲ್ಸ್‌ಗಳಿಂದ ದೇಶಾದ್ಯಂತ ಖ್ಯಾತಿ ಗಳಿಸಿದ್ದರು.
ಜಾಲತಾಣದ ಸಖತ್ ಸ್ಟಾರ್:
ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಇವರ ವಿಡಿಯೋಗಳು ಮಿಲಿಯನ್ ಗಟ್ಟಲೆ ವೀಕ್ಷಣೆ ಕಾಣುತ್ತಿದ್ದವು. ವಿಶೇಷವಾಗಿ ಇವರು ಮಾತನಾಡುತ್ತಿದ್ದ ಉತ್ತರ ಕನ್ನಡದ ಸ್ಥಳೀಯ ಭಾಷಾ ಶೈಲಿ ಹಾಗೂ ಮುಖದಲ್ಲಿನ ಮುಗುಳ್ನಗೆ ನೆಟ್ಟಿಗರ ಮನಗೆದ್ದಿತ್ತು. ಅಜ್ಜಿ-ಮೊಮ್ಮಗನ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಮನರಂಜನೆ ನೀಡುತ್ತಾ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿದ್ದರು.
ಅಭಿಮಾನಿಗಳ ಶೋಕ:
ಲಕ್ಷ್ಮಿ ಅಜ್ಜಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. “ನಮ್ಮನೆಯ ಅಜ್ಜಿಯನ್ನು ಕಳೆದುಕೊಂಡಂತಿದೆ”, “ಅಜ್ಜಿಯ ಮುಗ್ಧ ನಗು ಇನ್ನು ನೆನಪು ಮಾತ್ರ” ಎಂದು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಲಕ್ಷ್ಮಿ ಅಜ್ಜಿ ಕೇವಲ ಒಬ್ಬ ವಯೋವೃದ್ಧೆಯಾಗಿರದೆ, ಡಿಜಿಟಲ್ ಯುಗದಲ್ಲಿ ವಯಸ್ಸು ಯಾವುದಕ್ಕೂ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.








