ಬೆಂಗಳೂರು : ಮನೆ ಕಳ್ಳತನ ಪ್ರಕರಣ ಸಂಬಂಧ ಹೊರ ರಾಜ್ಯದ ವ್ಯಕ್ತಿಯನ್ನು 9 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿ- ಇಟ್ಟಿದ್ದ ಆರೋಪದ ಮೇಲೆ ಅಮೃತಹಳ್ಳಿ ಠಾಣೆ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗದ (ಎಸ್‌ಎಚ್‌ಆರ್‌ಸಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಂಬೈ ಮೂಲದ ಯಾಸಿನ್ ಮುಕ್ಸುಲ್ ಖಾನ್ ಅಲಿಯಾಸ್ ಅಸ್ಲಾಂ ಪಾಂಡೆ (47) ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೆ ಒಳಗಾಗಿದ್ದವ. ಶುಕ್ರವಾರ ಸಂಜೆ ಎಸ್‌ಎಚ್‌ಆರ್‌ಸಿ ಪೊಲೀಸ್ ವಿಭಾಗದ ಡಿವೈಎಸ್‌ಪಿ ಸುಧೀರ್ ಹೆಗಡೆ ನೇತೃತ್ವದ ತಂಡ ದಾಳಿ ನಡೆಸಿತು.
ಪೊಲೀಸ್ ಠಾಣೆಯ ಸಿಸಿ ದೃಶ್ಯಾವಳಿ ಮತ್ತು ಕೆಲ ದಾಖಲೆಗಳನ್ನು ಎಸ್‌ಎಚ್‌ಆರ್‌ಸಿ ಜಪ್ತಿ ಮಾಡಿದೆ. ಠಾಣೆಯಲ್ಲಿ ಯಾಸಿನ್‌ನನ್ನು ಅಕ್ರಮ ಬಂಧನದಲ್ಲಿ ಇರಿಸಿರುವುದು ಗೊತ್ತಾಗಿದ್ದು, ಇನ್‌ಸ್ಪೆಕ್ಟರ್ ಅಂಬರೀಷ್ ಸೇರಿ ಇತರರ ವಿರುದ್ಧ ಎಸ್‌ಎಚ್‌ಆರ್‌ಸಿ ಪ್ರಕರಣ ದಾಖಲಿಸಿದೆ.
2023ರಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಯಾಸಿನ್‌ನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದ ಆರೋಪಿ ನಗರವನ್ನು ತೊರೆದು ಮುಂಬೈಗೆ ಮರಳಿದ್ದ. ಕೋರ್ಟ್ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ವಾರಂಟ್ ಜಾರಿಗೊಳಿಸಲಾಗಿತ್ತು. ಮುಂಬೈಗೆ ತೆರಳಿದ ಅಮೃತಹಳ್ಳಿ ಪೊಲೀಸರು, ಫೆ.1ರಂದು ಯಾಸಿನ್‌ನನ್ನು ವಶಕ್ಕೆ ಪಡೆದು ವಿಮಾನದಲ್ಲಿ ನಗರಕ್ಕೆ ಕರೆತಂದಿದ್ದರು.
ನ್ಯಾಯಾಲಯಕ್ಕೆ ಹಾಜರುಪಡಿಸದೆ ಯಾಸಿನ್‌ನನ್ನು ಠಾಣೆಯಲ್ಲೇ ಅಕ್ರಮ ಬಂಧನದಲ್ಲಿಟ್ಟಿದ್ದರು. ಈ ಬಗ್ಗೆ ಎಎಚ್‌ಆರ್‌ಸಿಗೆ ಯಾಸಿನ್ ಕುಟುಂಬಸ್ಥರು ದೂರು ನೀಡಿದ್ದರು. ಡಿವೈಎಸ್ಪಿ ಸುಧೀರ್ ಹೆಗಡೆ, ಅಮೃತಹಳ್ಳಿ ಠಾಣೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಸಿದಾಗ ಪೊಲೀಸರ ಕರ್ತವ್ಯಲೋಪ ಬೆಳಕಿಗೆ ಬಂದಿದೆ. ಆರೋಪಿತನ ಬಗ್ಗೆ ಠಾಣೆ ಡೈರಿ ಸೇರಿ ಇತರೆ ದಾಖಲೆಗಳಲ್ಲಿ ಸಹ ಉಲ್ಲೇಖಿಸಿಲ್ಲ. ಹೀಗಾಗಿ ಅಕ್ರಮ ಬಂಧನದಲ್ಲಿ ಇಟ್ಟು ಹಿಂಸೆ ನೀಡಿದ್ದಾರೆ ಎಂದು ಎಸ್‌ಎಚ್‌ಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.