ಹಾವೇರಿ : ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆಗೆ ಭರದ ಸಿದ್ಧತೆ ನಡೆದಿದ್ದು ಈಗಾಗಲೇ ಉಭಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿವೆ. ಇನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದ ಮಂಜುನಾಥ್ ಕುನ್ನೂರ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ.
ಹೌದು ಶಿಗ್ಗಾವಿಯಲ್ಲಿ ಯಾಸಿರ್ ಪಠಾಣ್ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಬಂಡಾಯವೆದ್ದ ಅಜ್ಜಂಪೀರ್ ಖಾದ್ರಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಚರ್ಚಿಸಿದ ಬಳಿಕ ನಾಮಪತ್ರ ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಆದರೆ ಇದೀಗ ಅಗತ್ಯ ಹಾಗೂ ಸಮರ್ಪಕ ವಿವರ ನೀಡಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ಕುನ್ನುರ್ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿದೆ.
ತಮ್ಮ ಪುತ್ರ ರಾಜು ಕುನ್ನೂರ್ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಂಜುನಾಥ್ ಅವರು ಪಕ್ಷಕ್ಕೆ ಈ ಮೂಲಕ ಬಂಡಾಯದ ಬಿಸಿಯನ್ನು ಮುಟ್ಟಿಸಿದ್ದಾರೆ. ಇನ್ನು ಯಾವುದೇ ಬಂಡಾಯದ ಬಿಸಿ ಹೆಚ್ಚಾಗಲು ಬಿಡಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆಯ ಎದುರಿಸುತ್ತೇವೆ. ಖಾದ್ರಿ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.