ಬೀದರ್ : ಬೀದರ್ ಜಿಲ್ಲೆಯ ಯೂಟ್ಯೂಬರ್ ಸಲ್ಮಾನ್ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಕೆಲ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಫೇಸ್‌ಬುಕ್ ಲೈವ್‌ನಲ್ಲಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ ಏನು?
ಯೂಟ್ಯೂಬರ್ ಸಲ್ಮಾನ್ ಖಾನ್ ಎಂಬ ಯುವಕ, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರದೀಪ್ ಗುಂಟಿ ಸೇರಿದಂತೆ ಕೆಲ ಪೊಲೀಸ್ ಸಿಬ್ಬಂದಿಯಿಂದ ನಿರಂತರ ಕಿರುಕುಳಕ್ಕೆ ಒಳಗಾಗಿದ್ದೇನೆಂದು ಆರೋಪಿಸಿ, ಪೇಸ್‌ಬುಕ್ ಲೈವ್‌ನಲ್ಲೇ ಮಾತ್ರೆಗಳು ನುಂಗಿ ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಬೀದರ್ ಜಿಲ್ಲೆಯಲ್ಲಿ ಯೂಟ್ಯೂಬರ್ ಆತ್ಮಹತ್ಯೆ ಯತ್ನ ಪ್ರಕರಣವು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ಸಲ್ಮಾನ್ ಖಾನ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಮಾಜದ ವಿವಿಧ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರು. ಆದರೆ, ಈ ವಿಡಿಯೋಗಳ ವಿಷಯವಸ್ತು ಸಮಾಜದಲ್ಲಿ ಶಾಂತಿ ಕೆದಕುವಂತಿದೆ ಎಂದು ಹೇಳಿ, ಶಾಂತಿ ಸಭೆ ಇದೆ ಎಂದು ಕಛೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಮುಂದುವರೆಸದಂತೆ ತಾಕೀತು ಮಾಡಲಾಗಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.
ಅಷ್ಟೆ ಅಲ್ಲದೇ, ಎನ್‌ಕೌಂಟರ್ ಮಾಡುತ್ತೇನೆ ಮತ್ತು ಮರ್ಡರ್ ಮಾಡುತ್ತೇನೆ ಎಂಬ ಬೆದರಿಕೆಗಳನ್ನು ಹಾಕಲಾಗಿದೆ ಎಂದು ಕಣ್ಣೀರಿಟ್ಟು ಪೇಸ್‌ಬುಕ್ ಲೈವ್‌ನಲ್ಲಿ ಹೇಳಿಕೊಂಡಿದ್ದಾರೆ.ತಮ್ಮ ಲೈವ್ ವಿಡಿಯೋದಲ್ಲಿ ಸಲ್ಮಾನ್, ಈ ವಿಡಿಯೋ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಬೇಕು ಎಂದು ಹೇಳಿದ್ದು, ಪೊಲೀಸ್ ಇಲಾಖೆಯ ಕಿರುಕುಳದಿಂದಲೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.








