ಹುಬ್ಬಳ್ಳಿ : ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳು ಗುರೂಜಿ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಗುರೂಜಿ ಅವರ ಕುಟುಂಬಸ್ಥರು ಆರೋಪಿಗಳು ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ ಕೆರೆಯ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ನಡೆದ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಗೂರೂಜಿ ಅವರ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮೆರೇವಾಡ ವಿರುದ್ಧ ಗುರೂಜಿ ಸಂಬಂಧಿಕರಾದ ಉದ್ಯಮಿ ಸಂಜಯ ಅಂಗಡಿ ಸೆಪ್ಟೆಂಬರ್ 2ರಂದು ದೂರು ನೀಡಿದ್ದಾರೆ. 2022ರ ಜುಲೈನಲ್ಲಿ ನಡೆದ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ವಿಚಾರಣೆ ಮಾಹಿತಿ ಪಡೆಯಲು, 2024ರ ಫೆ. 14ರಂದು ಸಂಜಯ ಅವರು ತಂಗಿ ಜೊತೆ ಹುಬ್ಬಳ್ಳಿ ಕೋರ್ಟ್‌ಗೆ ಬಂದಿದ್ದರು. ಆ ವೇಳೆ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದರು.
ವಾಪಸ್ಸು ಅವರನ್ನು ಕರೆದೊಯ್ಯುವಾಗ ಗುರೂಜಿ ಸಂಬಂಧಿಕರಿಗೆ ‘ನೀವು ಕೋರ್ಟ್‌ನಲ್ಲಿ ಕಂಡರೆ ಗುರೂಜಿ ತರಹ ಎತ್ತಿ ಬಿಡುತ್ತೀವಿ. ಒಂದೇ ದಿನ ಹೊರಗೆ ಬಂದರೂ ನಿಮ್ಮ ಯಾರನ್ನೂ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದೂ ಅಲ್ಲದೆ, ಸುರೇಶ ಪಲ್ಲೇದ ಮೂಲಕ ಪ್ರಕರಣ ರಾಜೀ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಮಿಷನರ್ ಹೇಳಿದ್ದೇನು?
ಇನ್ನೂ ಈ ಒಂದು ಬೆದರಿಕೆ ಆರೋಪದ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿ ಕುಮಾರ್ ಹೇಳಿಕೆ ಸರಳವಾಸ್ತು ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೀವ ಬೆದರಿಕೆ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಆರೋಪಿಗಳೆಬ್ಬರೂ ಜೀವ ಬೆದರಿಕೆ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ಗುರೂಜಿ ಕುಟುಂಬಸ್ಥರು ನೀಡಿರುವ ದೂರನ್ನಾಧರಿಸಿ ಕೇಸ್ ದಾಖಲಿಸಿಕೊಂಡಿದ್ದೇವೆ. ಆರೋಪಿಗಳನ್ನು ಕೋರ್ಟಿಗೆ ಕರೆ ತಂದಾಗ ಜೀವ ಬೆದರಿಕೆ ಹಾಕಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಅಗತ್ಯವಿದ್ದರೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ.