ಬೆಂಗಳೂರು : ಬೀದರ್ನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಂತ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಸಚಿನ್ ಪಂಚಾಳ ಗುತ್ತಿಗೆದಾರಣೆ ಅಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಗಜಿ ಈ ಒಂದು ಹೇಳಿಕೆ ನೀಡಿದ್ದಾರೆ.
ಹೌದು ಗುತ್ತಿಗೆದಾರರ ಸಂಘದ ಬೀದರ್ ಘಟಕದಿಂದಲೂ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇತರೆ ಜಿಲ್ಲೆಗಳಿಂದಲೂ ಆತ ಗುತ್ತಿಗೆದಾರ ಅಲ್ಲವೆಂಬ ಮಾಹಿತಿ ತಿಳಿದು ಬಂದಿದೆ. ಧಾರವಾಡ ಇಂಜಿನಿಯರ್ ಕಚೇರಿಯಲ್ಲೂ ಗುತ್ತಿಗೆದಾರ ಎಂದು ಎಲ್ಲೂ ಕೂಡ ನೋಂದಣಿ ದಾಖಲೆ ಇಲ್ಲ. ಎರಡು ಕಚೇರಿಯಿಂದ ಮಾಹಿತಿಯನ್ನು ಗುತ್ತಿಗೆದಾರರ ಸಂಘ ಇದೀಗ ಪಡೆದುಕೊಂಡಿದೆ.ಆದರೆ ಎಲ್ಲೂ ಕೂಡ ಸಚಿನ್ ಪಂಚಾಳ್ ಹೆಸರು ಗುತ್ತಿಗೆದಾರ ಎಂದು ನಮೂದು ಆಗಿಲ್ಲ ಎನ್ನಲಾಗಿದೆ.
ಡೆತ್ನೋಟ್ನಲ್ಲಿರುವ ಅಸಲಿ ವಿಚಾರವೇನು?
ತಮ್ಮ ಸಾವಿಗೆ ರಾಜು ಕಪನೂರ್ ಮತ್ತು ಗ್ಯಾಂಗ್ ಕಾರಣ ಎಂದು ಉಲ್ಲೇಖಿಸಿರುವ ಸಚಿನ್ ಪಂಚಾಳ್, ಮುಂದುವರಿದು ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ತಾವು ಸುಮಾರು ಎರಡು ವರ್ಷಗಳಿಂದ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಂಪನಿಯ ಎಂಡಿ ಮೂಲಕ ರಾಜು ಕಪನೂರ್ ಪರಿಚಯವಾಗಿತ್ತು ಎಂದು ಸಚಿನ್ ಉಲ್ಲೇಖಿಸಿದ್ದಾರೆ.
ಸುಮಾರು 12 ಕೋಟಿ ರೂಪಾಯಿಯ ಒಂದು ಟೆಂಡರ್ ಕರೆಯಲಾಗುತ್ತಿದ್ದು, ಅದನ್ನು ನಿಮಗೆ ಮಾಡಿಸಿ ಕೊಡುತ್ತೇನೆ ಎಂದು ರಾಜು ಕಪನೂರ್ ಭರವಸೆ ನೀಡಿದ್ದ. ಈ ಟೆಂಡರ್ ಮಾಡಿಕೊಡಬೇಕಿದ್ದರೆ ಶೇಕಡ 5ರಷ್ಟು ಕಮಿಷನ್ ನೀಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತನ್ನು ದಾಟುವುದಿಲ್ಲ ಎಂದು ಹೇಳಿದ್ದ. ಸುಮಾರು ಐದಾರು ಬಾರಿ ನಾವಿಬ್ಬರೂ ಜೊತೆಯಾಗಿ ಬೆಂಗಳೂರಿಗೆ ಹೋಗಿ ಮಾನ್ಯ ಸಚಿವರನ್ನು ಭೇಟಿಯಾಗಿ ಬಂದಿರುತ್ತೇವೆ. ಆದರೂ ಸಚಿವರು ಮೊಬೈಲ್ ಫೋನ್ ಮೂಲಕ ಕರೆ ಮಾಡಿ, ಸಿಇ ಇಜಾಜ್ ಹುಸೇನ್ ಅವರಿಗೆ ಮಾಡಿಕೊಡು ಎಂದು ಹೇಳಿರುತ್ತಾರೆ.
ಆದರೂ ಈ ಟೆಂಡರ್ ಗೆ 5% ಕಮಿಷನ್ ಎಂದರೆ, 60 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಕಪನೂರ್ ಬೇಡಿಕೆ ಇಟ್ಟಿದ್ದ.10 ಲಕ್ಷ ರೂಪಾಯಿ ಮುಂಗಡ ಹಣವನ್ನು ಆತನಿಗೆ ನೀಡಿದ್ದೆವು. ಬಳಿಕ ಆತ 15 ಕೋಟಿ ರೂಪಾಯಿ ಮೊತ್ತದ ಬೇರೆ ಟೆಂಡರ್ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಸಚಿನ್ ಪಂಚಾಳ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು.ಈ ವಿಚಾರ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿನ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಾಗಲೇ ಆ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಈ ವಿಚಾರವಾಗಿ ಸ್ವತಂತ್ರ ತನಿಖೆ ಆಗಲಿ, ಸಿಐಡಿಗೆ ಒಪ್ಪಿಸಲಿ ಎಂದು ಹೇಳಿದ್ದರು. ಇದೀಗ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.