ಮುಂಬೈ: ಭಾರತೀಯ ರೂಪಾಯಿ ಮೌಲ್ಯದ ಕುಸಿತ ಗುರುವಾರವೂ ಮುಂದುವರಿದಿದ್ದು, ಅಮೆರಿಕನ್ ಡಾಲರ್ ಎದುರು ಮತ್ತೆ 20 ಪೈಸೆ ಇಳಿಕೆ ಕಾಣುವ ಮೂಲಕ ₹95.86ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಈ ವಾರದ ಸತತ ಮೂರನೇ ದಿನವೂ ರೂಪಾಯಿ ದಾಖಲೆಯ ಕುಸಿತ ಕಂಡಿರುವುದು ಆರ್ಥಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ $106ಕ್ಕೆ ಏರಿಕೆಯಾಗಿದೆ. ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರು (FPI) ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಹಣವನ್ನು ಹಿಂಪಡೆಯುತ್ತಿರುವುದು ರೂಪಾಯಿ ಮೇಲೆ ಒತ್ತಡ ಹೇರಿದೆ.ಇರಾನ್ ಯುದ್ಧ ಮತ್ತು ಅಮೆರಿಕ-ಚೀನಾ ನಡುವಿನ ರಾಜತಾಂತ್ರಿಕ ಬೆಳವಣಿಗೆಗಳು ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ.
ಮಾರುಕಟ್ಟೆಯ ಇಂದಿನ ಸ್ಥಿತಿಗತಿ:
ಗುರುವಾರ ಬೆಳಗ್ಗೆ ಇಂಟರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ₹95.74ರಲ್ಲಿ ವಹಿವಾಟು ಆರಂಭಿಸಿತು. ಆದರೆ, ನಂತರದ ಅವಧಿಯಲ್ಲಿ ತೀವ್ರ ಕುಸಿತ ಕಂಡು ₹95.86ಕ್ಕೆ ತಲುಪಿತು. ಬುಧವಾರವಷ್ಟೇ ರೂಪಾಯಿ ₹95.66ರಲ್ಲಿ ಸ್ಥಿರವಾಗಿತ್ತು. ಈ ವಾರವೊಂದರಲ್ಲೇ ರೂಪಾಯಿ ಮೌಲ್ಯದಲ್ಲಿ 1.4% ನಷ್ಟು ಇಳಿಕೆಯಾಗಿದೆ.
“ಆಭರಣ ಮಳಿಗೆಗಳಿಂದ ಹಿಡಿದು ಪೆಟ್ರೋಲ್ ಬಂಕ್ಗಳವರೆಗೆ, ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವಿನ ಬೆಲೆಯೂ ಈಗ ದುಬಾರಿಯಾಗುತ್ತಿದೆ. ರೂಪಾಯಿ ಮೌಲ್ಯದ ಕುಸಿತದ ಭಾರ ಸಾಮಾನ್ಯ ಜನರ ಮೇಲೂ ಬೀರುತ್ತಿದೆ,” ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್ನ ಎಂಡಿ ಅಮಿತ್ ಪಬಾರಿ ಅಭಿಪ್ರಾಯಪಟ್ಟಿದ್ದಾರೆ.








