ಬೆಂಗಳೂರು : ರಾಜ್ಯದ ಭೋವಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 120 ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿ 60 ಕೋಟಿ ರೂ.ಅವ್ಯವಹಾರ ನಡೆಸಿದ್ದು, ಈ ಹಣವನ್ನು 100ಕ್ಕೂ ಹೆಚ್ಚಿನ ಖಾತೆಗಳಿಗೆ ವರ್ಗಾಯಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ಸೇರಿದಂತೆ 27 ಮಂದಿ ಜೇಬಿಗಿಳಿಸಿಕೊಂಡಿರುವ ಮಹತ್ವದ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಯಲ್ಲಿ ಬಯಲಾಗಿದೆ.
ಹೌದು ಇತ್ತ ಬಿಜೆಪಿ ವಾಲ್ಮೀಕಿ ಹಗರಣ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಸಿಎಂ ಸಿದ್ದರಾಮಯ್ಯ ಬಿಜೆಪಿ ಅವಧಿಯ ಕಾಲದಲ್ಲಿನ ಹಗರಣಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋದರು. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಬೇಟೆಯನ್ನು ಕಾಂಗ್ರೆಸ್ ಆರಂಭಿಸಿದೆ. ಆ ಸಂಬಂಧ ಭೋವಿ ಹಗರಣ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ.
ಹಗರಣ ಸಂಬಂಧ ಭೋವಿ ಅಭಿವೃದ್ಧಿನಿಗಮದಲ್ಲಿ ಸಂಗ್ರಹಿಸಿದ ದಾಖಲೆಗಳು ಹಾಗೂ ಬಂಧಿತ ಆರೋಪಿಯಾಗಿರುವ ನಿಗಮದ ಕಚೇರಿಯ ಅಧೀಕ್ಷಕ ಸುಬ್ಬಪ್ಪ ವಿಚಾರಣೆ ವೇಳೆ ಹೇಳಿದ ಮಾಹಿತಿ ಆಧರಿಸಿ ಅಕ್ರಮವು 60 ಕೋಟಿ ರು. ಎನ್ನುವುದು ಖಚಿತವಾಗಿದೆ. ದಾಖಲೆ ಶೋಧ ಮುಂದುವರೆದಿದ್ದು, ಅಕ್ರಮದ ಮೊತ್ತ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಭೋವಿ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ಉತ್ತೇಜನ ನೀಡುವ ಸಾಲ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡ ನಿಗಮದ ಕೆಲ ಅಧಿಕಾರಿಗಳು, ಆ ತಳವರ್ಗದ ಜನರಿಗೆ ಸಿಗಬೇಕಾದ ಹಣವನ್ನು ಮಧ್ಯವರ್ತಿಗಳನ್ನು ಮುಂದಿಟ್ಟು ನುಂಗಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳು ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.