ಬೆಳಗಾವಿ : ನಮ್ಮದೇ ಸರ್ಕಾರ ಇದ್ದರೂ ನಮಗೆ ಅನುದಾನ ಸಿಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಸದನದಲ್ಲೇ ಈ ಬಗ್ಗೆ ಘೋಷಣೆ ಮಾಡಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು,ಅಪೆಂಡಿಕ್ಸ್ ಇ ನಲ್ಲಿ 4,000 ಕೋಟಿ ರೂ., ಗ್ರಾಮೀಣ ರಸ್ತೆಗೆ 2,000 ಕೋಟಿ ರೂ. ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2000 ಕೋಟಿ ರೂ. ವಿತರಣೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಅನುದಾನ ಕೊರತೆ ನೀಗಿಸಲು ಒಟ್ಟು 6 ಸಾವಿರ ಕೋಟಿ ರೂ. ಬಿಡುಗಡೆ ಸಂಬಂಧ ಘೋಷಣೆ ಮಾಡುತ್ತೇನೆ. ಲೋಕೋಪಯೋಗಿ ಇಲಾಖೆಯಿಂದ 4 ಸಾವಿರ ಕೋಟಿ ರೂ., ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 2 ಸಾವಿರ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗುವುದು.ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ದೃಷ್ಟಿಯಿಂದ ಎರಡು ಇಲಾಖೆಯಿಂದ ಒಟ್ಟು 6 ಸಾವಿರ ರೂ. ಹಣವನ್ನು ಬಿಡುಗಡೆ ಮಾಡಲಾಗುವುದು. ಕನಿಷ್ಟ 26 ಕೋಟಿ ರೂ.ಗೂ ಹೆಚ್ಚು ಹಣ ಒಂದೊಂದು ಕ್ಷೇತ್ರಕ್ಕೆ ಸಿಗಲಿದೆ. ಯಾರು ಬೇಸರ ಮಾಡಿಕೊಳ್ಳಬೇಡಿ ಎಂದು ಸಿಎಂ ಭರವಸೆ ನೀಡಿದ್ದಾರೆ.