ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾವೇರಿ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರ ಮತ್ತು ಅಕೌಂಟ್ ಸೂಪರಿಂಟೆಂಡೆಂಟ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ.
ಕಾರ್ಯಪಾಲಕ ಅಭಿಯಂತರ ಕಾವೇರಿ ರಂಗನಾಥ್ ಮತ್ತು ಅಕೌಂಟ್ ಸೂಪರಿಂಟೆಂಡೆಂಟ್ ಉಮಾ ಮಹೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಅಧಿಕಾರಿಗಳು 1.45 ಲಕ್ಷ ರೂ.ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರದ ಅಬ್ದುಲ್ ಅಜೀಜ್ ಎಂಬವರಿಂದ ಅಧಿಕಾರಿಗಳು 1.45 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದರು.
ಅಬ್ದುಲ್ ಅಜೀಜ್ ಕಾವೇರಿ ನೀರಾವರಿ ನಿಗಮದ ಕಾಮಗಾರಿಗಳ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿದ್ದು, 5 ಕಾಮಗಾರಿಗಳನ್ನು ಮಾಡಿದ್ದಾರೆ. ಅದರ ಬಾಬ್ತು ಬಿಲ್ 23 ಲಕ್ಷ ರೂ ಬಾಕಿ ಇದ್ದು, ಅದನ್ನು ನೀಡಲು ಶೇ.6 ಕಮಿಷನ್ ಆದ 1.45 ಲಕ್ಷ ರೂ ಹಣ ನೀಡುವಂತೆ ಕಾವೇರಿ ರಂಗನಾಥ್ ಮತ್ತು ಉಮಾ ಮಹೇಶ್ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.