ಬೆಂಗಳೂರು : ಬೆಂಗಳೂರಲ್ಲಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವ ರಾಜು ಅವರ ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ.
ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾ ದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿಯ 3 ತಂಡಗಳು ಅವರಿಗಾಗಿ 2-3 ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ.
ಈ ಮಧ್ಯೆ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ. ಎಲ್ಲ ವಿಮಾನ ನಿಲ್ದಾಣಗಳ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಲುಕ್ ಔಟ್ ನೋಟಿಸ್ ನೀಡಲು ಮುಂದಾಗಿದ್ದಾರೆ. ಜತೆಗೆ ರೈಲು ನಿಲ್ದಾಣಗಳಿಗೂ ಮಾಹಿತಿ ನೀಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಸವರಾಜು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.








