ಮಂಗಳೂರು : ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ರೋಶನ್ ಸಲ್ಡಾನ್ಹಾ ವಿರುದ್ಧದ ನಾಲ್ಕು ಪ್ರಕರಣಗಳನ್ನು ಇದೀಗ ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ. ಮಂಗಳೂರಿನ ಸೆನ್ ಠಾಣೆ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ.
ಬಿಹಾರ ಉದ್ಯಮಿಯೊಬ್ಬರಿಗೆ ರೋಶನ್ 10 ಕೋಟಿ.ರು. ಮೋಸ ಮಾಡಿದ ಪ್ರಕರಣ ಸೇರಿ ಮಂಗಳೂರಿನ ಸೆನ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಮುಂಬೈ ಮೂಲದ ಉದ್ಯಮಿಗೆ 5 ಕೋ.ರು. ಪಡೆದು ವಂಚನೆ ಪ್ರಕರಣ, ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ14.74 ಲಕ್ಷ ರು. ವಂಚನೆ ಎರಡು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಲಿದೆ.
ಸುಮಾರು 200 ಕೋಟಿ ರು.ಗೂ ಹೆಚ್ಚು ವಂಚನೆ ನಡೆಸಿದ್ದಾನೆ ಎನ್ನಲಾದ ಬಹುಕೋಟಿ ವಂಚಕ ರೋಶನ್ ಸಲ್ದಾನ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿ ರಿಲೀಫ್ ನೀಡಿತ್ತು. ಕಳೆದ ಜುಲೈನಲ್ಲಿ ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇತ್ತೀಚೆಗೆ ಸಾಲ ನೀಡುವ ನೆಪದಲ್ಲಿ ಭಾರೀ ವಂಚನೆ ನಡೆಸಿದ ಜಾಲದಲ್ಲಿ ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ರೋಶನ್ ನನ್ನು ಸಿಇಎನ್ ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣ ಸಿಐಡಿ ಗೆ ವರ್ಗಾವಣೆ ಆಗಿದೆ.
ಮಂಗಳೂರಿನ ಸೆನ್ ಪೊಲೀಸರು ಜು.17ರಂದು ರೋಶನ್ ಸಲ್ಡಾನ್ಹಾನನ್ನು ಆತನ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಬಳಿಕ ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಆತನ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಹಲವು ಮಂದಿ ಉದ್ಯಮಿಗಳು ತಮಗಾದ ವಂಚನೆಗೆ ಸಂಬಂಧಿಸಿದಂತೆ ದೂರು ನೀಡಲು ಮುಂದೆ ಬಂದಿದ್ದರು. ಮಹಾರಾಷ್ಟ್ರದ ಉದ್ಯಮಿಗೆ 5 ಕೋ.ರು. ಮತ್ತು ಅಸ್ಸಾಂ ಮೂಲದ ವ್ಯಕ್ತಿಗೆ 20 ಕೋ.ರು. ವಂಚನೆ ಮಾಡಿರುವ ಕುರಿತಂತೆಯೂ ಪ್ರಕರಣ ದಾಖಲಾಗಿತ್ತು. ಹೈದರಾಬಾದ್ ಮೂಲದ ವ್ಯಕ್ತಿ 1 ಕೋ.ರು. ವಂಚನೆ ಬಗ್ಗೆ ದೂರು ನೀಡಿದ್ದರು.