ನವದೆಹಲಿ : ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಭಾರೀ ಏರಿಕೆಯಾಗಿದೆ.
ಟ್ರಂಪ್ ವಿಷಯನ್ನು ಪ್ರಸ್ತಾಪ ಮಾಡುತ್ತಿದ್ದಂತೆ ತೈಲ ರಫ್ತು ಮಾಡುವ ಒಪೆಕ್ ರಾಷ್ಟ್ರಗಳ ಬ್ರೆಂಟ್ ಕಚ್ಚಾತೈಲದ ಬೆಲೆ 4.5% ಏರಿಕೆಯಾಗಿದೆ. ಒಂದು ಬ್ಯಾರೆಲ್ ಕಚ್ಚಾ ತೈಲದ ದರ 106.42 ಡಾಲರ್ಗೆ (9,930 ರೂ.) ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್(WTI) ದರ 4% ಏರಿಕೆಯಾಗಿ 104.24 ಡಾಲರ್ನಲ್ಲಿ (9,732 ರೂ.) ವ್ಯವಹಾರ ನಡೆಸುತ್ತಿದೆ.
ಯುದ್ಧವು ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಕೊನೆಗೊಳ್ಳಲಿದ್ದು, ಆ ನಂತರ ತೈಲ ಬೆಲೆಗಳು ಕಲ್ಲಿನಂತೆ ಕೆಳಕ್ಕೆ ಬೀಳಲಿವೆ. ಹಾರ್ಮುಜ್ ಜಲಸಂಧಿಯ ಮೂಲಕ ಬರುವ ತೈಲದ ಅಗತ್ಯ ಅಮೆರಿಕಕ್ಕಿಲ್ಲ. ಅಲ್ಲಿಂದ ತೈಲ ಪಡೆಯುವ ಇತರ ದೇಶಗಳೇ ಅದರ ರಕ್ಷಣೆಯ ಜವಾಬ್ದಾರಿ ಹೊರಬೇಕು. ತೈಲ ಬಿಕ್ಕಟ್ಟು ಎದುರಿಸುತ್ತಿರುವ ಮಿತ್ರರಾಷ್ಟ್ರಗಳು ತಮಗೆ ಬೇಕಾದ ತೈಲವನ್ನು ತಾವೇ ಹಾರ್ಮೋಜ್ ಜಲಸಂಧಿಯಿಂದ ಪಡೆದುಕೊಳ್ಳಲು ಧೈರ್ಯ ತೋರಬೇಕು ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.








