ಬೆಂಗಳೂರು : ಒಳಮೀಸಲಾತಿ ಜಾರಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ ಸಿ ಸಮುದಾಯದ ಆಂತರಿಕ ಸಮೀಕ್ಷೆ ನಡೆಸಲು ಸೂಚಿಸಿತ್ತು. ಈ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯ ಪ್ರಗತಿ ಕುರಿತು ನಿವೃತ್ತ ನ್ಯಾ.ನಾಗಮೋಹನದಾಸ್ ಆಯೋಗವು ಇದೀಗ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದೆ.
ಜುಲೈ 30ರಂದೇ ವರದಿ ಸಿದ್ಧವಾಗಿತ್ತು. ಮುಖ್ಯಮಂತ್ರಿಯವರ ಸಮಯಾವಕಾಶ ಕೇಳಿದ್ದರೂ ಕಾರ್ಯ ಒತ್ತಡ ಕಾರಣಕ್ಕೆ ಅವರು ಲಭ್ಯರಾಗಲಿಲ್ಲ. ಹೀಗಾಗಿ, ಇಂದು ಬೆಳಿಗ್ಗೆ 11 ಗಂಟೆಗೆ ವರದಿ ನಾಗಮೋಹನ್‌ದಾಸ್ ವರದಿ ಸಲ್ಲಿಸಿದ್ದಾರೆ. ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಈ ಹಿಂದೆ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಆ ವರದಿಯನ್ನು ಬದಿಗಿಟ್ಟು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಪ್ರತ್ಯೇಕ ವರದಿ ನೀಡಿತ್ತು.
ಆ ಸಮಿತಿಯು ಪರಿಶಿಷ್ಟ ಜಾತಿಯನ್ನು ಪ್ರತ್ಯೇಕ ಗುಂಪುಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿತ್ತು. ಈ ಮಧ್ಯೆ, ವಿಧಾನಸಭಾ ಚುನಾವಣೆ ಎದುರಾಯಿತು. ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಳ ಮೀಸಲಾತಿಗಾಗಿ ನಾಗಮೋಹನ್‌ದಾಸ್ ಆಯೋಗದ ಮೂಲಕ ಹೊಸದಾಗಿ ಸಮೀಕ್ಷೆ ನಡೆಸಿದೆ. ಈ ಆಯೋಗವು ಜಾತಿಗಳನ್ನು ಯಾವ ರೀತಿ ಗುಂಪುಗಳಾಗಿ ವಿಂಗಡಿಸಿ, ಮೀಸಲಾತಿ ಹಂಚಿಕೆ ಮಾಡಿದೆ ಎಂಬ ಕುತೂಹಲ ಮೂಡಿದೆ.
ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ಮೇ 5ರಿಂದ ವಿವಿಧ ಹಂತಗಳಲ್ಲಿ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ’ ನಡೆದಿತ್ತು. ಸಂಗ್ರಹಿಸಲಾದ ದತ್ತಾಂಶಗಳನ್ನು ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ವಿಶ್ಲೇಷಿಸಲಾಗಿದೆ. ಇದೀಗ ವಿಧಾನಸೌಧದಲ್ಲಿ ಸೇಮ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಾಗಮೋಹನ್ದಾಸ್ ಆಯೋಗವು ಪರಿಶಿಷ್ಟ ಜಾತಿ ಒಳಮಿಸಲಾತಿ ವರದಿ ಸಲ್ಲಿಸಿದೆ.