ಬೆಂಗಳೂರು : ಬಿಸಿಲಿನ ತಾಪಮಾನ ಹೆಚ್ಚಾಗಿರುವುದಿಂದ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೌದು ಬಿಸಿಲಿನ ತಾಪಮಾನದ ಹೆಚ್ಚಳ ಹಿನ್ನೆಲೆ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ.
2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ಇರುವ ಕಚೇರಿ ವೇಳಾಪಟ್ಟಿಯ ಬದಲಾಗಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ನಿಗದಿ ಮಾಡಿ ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ.
ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೆಳಿಗ್ಗೆ 8ರಿಂದ ಮಾಧ್ಯಾಹ್ನ 1:30ರವರೆಗೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.
ಈ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಲೋಪ/ಅಡೆತಡೆಯಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆಯಾಗದಂತೆ ಮತ್ತು ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಪರಿಮಿತಿಯಿಲ್ಲದೆ ಕರ್ತವ್ಯ ನಿರ್ವಹಿಸಬೇಕು ಎಂದಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2026ನೇ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯ ಬದಲಾಗಿ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬದಲಾವಣೆ ಮಾಡಿ ಆದೇಶಿಸಿದೆ.








