ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಹರಿ ಸಿಂಘಾನಿಯಾ ಅವರು ಮಾಲ್ಡೀವ್ಸ್‌ನಲ್ಲಿ ಸಂಭವಿಸಿದ ಭೀಕರ ಸ್ಪೀಡ್‌ಬೋಟ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸಿಂಘಾನಿಯಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೋಟ್ ಮಗುಚಿ ಅವಘಡ: ಶುಕ್ರವಾರ ಮುಂಜಾನೆ ಮಾಲ್ಡೀವ್ಸ್‌ನ ‘ವಿ ಫೆಲಿಧೂ’ ದ್ವೀಪದ ಸಮೀಪ 7 ಮಂದಿ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಬೋಟ್‌ನಲ್ಲಿ ಐವರು ಭಾರತೀಯರು, ಒಬ್ಬ ಬ್ರಿಟಿಷ್ ಮತ್ತು ಒಬ್ಬ ರಷ್ಯನ್ ಪ್ರಜೆ ಇದ್ದರು.
ಇಬ್ಬರು ನಾಪತ್ತೆ: ಅಪಘಾತದ ನಂತರ ಭಾರತದ ಖ್ಯಾತ ರ‍್ಯಾಲಿ ಡ್ರೈವರ್ ಹರಿ ಸಿಂಗ್ ಸೇರಿದಂತೆ ಇಬ್ಬರು ಭಾರತೀಯರು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF) ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.
ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ರಕ್ಷಿಸಿ ಮುಂಬೈಗೆ ಕರೆತರಲಾಗಿದೆ. ಸದ್ಯ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಹಡಗಿನಲ್ಲಿದ್ದ ಮತ್ತೊಬ್ಬ ಭಾರತೀಯ ಮಣಿಕ ಭೀಮಸೇನ್ ಭಾರದ್ವಾಜ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.








