ಬೆಂಗಳೂರು : ಕಳೆದ ವರ್ಷ ಬೆಂಗಳೂರಿನ ಹೆಬ್ಬಗೋಡಿ ಸಮೀಪದಲ್ಲಿರುವ ಜೆ.ಆರ್. ಫಾರ್ಮ್ಹೌಸ್ ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ತೆಲುಗು ನಟಿ ಹೇಮಾಗೆ ಇದೀಗ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಹೌದು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ನ್ಯಾಯಪೀಠವು ಈ ಒಂದು ಆದೇಶ ನೀಡಿದೆ. ಅಲ್ಲದೆ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಸಹ ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಅರ್ಜಿದಾರರು ಮಾದಕ ವಸ್ತುಗಳನ್ನು ಸೇವಿಸಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಾದ ಮಂಡಿಸಿದರು.ವಾದ ಆಲಿಸಿದ ಪೀಠ, ಮುಂದಿನ ವಿಚಾರಣೆಯವರೆಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿ ಆದೇಶಿಸಿದೆ.
ಪ್ರಕರಣ ಹಿನ್ನೆಲೆ ಏನು?
ಕಳೆದ ವರ್ಷ ಬೆಂಗಳೂರಿನ ಹೆಬ್ಬಗೋಡಿ ಸಮೀಪದಲ್ಲಿರುವ ಜೆ.ಆರ್. ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದಾಗ ತೆಲುಗು ನಟಿ ಹೇಮಾ ಸಿಕ್ಕಿಬಿದ್ದಿದ್ದರು. ಆ ಸುದ್ದಿ ಹೊರಬಿದ್ದಾಗ ಅದೇ ಫಾರ್ಮ್ಹೌಸ್ನಿಂದಲೇ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಮಾ ಹರಿಬಿಟ್ಟಿದ್ದರು. ತಾವು ಹೈದರಾಬಾದ್ನಲ್ಲಿ ಇರುವುದಾಗಿ ಬಿಂಬಿಸಲು ಆ ವಿಡಿಯೋ ಮೂಲಕ ಹೇಮಾ ಪ್ರಯತ್ನಿಸಿದ್ದರು.ಬಳಿಕ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ನಂತರ ಜೂನ್ 12 ರಂದು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ 1,086 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಉದ್ಯಮಿಗಳು ಸೇರಿದ್ದರು. ಅಲ್ಲದೆ, ಹಲವರು ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದಾಗಿ ವಿವರಿಸಿದ್ದರು. ಇದೀಗ ವಿಚಾರಣಾ ಪ್ರಕಣದಲ್ಲಿ ವಿಚಾರಣಾ ಪ್ರಕ್ರಿಯೆ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.