ರಾಮನಗರ : ಹೆಂಡತಿಗೆ ತವರಿನಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪ್ರತಿದಿನ ಗಂಡ ಕಿರುಕುಳ ನೀಡುತ್ತಿದ್ದ, ಅಲ್ಲದೆ ಆಸ್ತಿಗಾಗಿ ಪತ್ನಿಯ ಮೇಲೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಶ್ವಿನಿ (30) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.ಕೊಲೆ ಮಾಡಿದ ಪತಿಯನ್ನು ರಮೇಶ್ ಎಂದು ಹೇಳಲಾಗುತ್ತಿದೆ.ಕೆಲವು ವರ್ಷಗಳ ಹಿಂದೆ ಅಶ್ವಿನಿಯನ್ನು ಮದಿವೆ ಮಾಡಿಕೊಂಡಿದ್ದ ರಮೇಶ್, ವರದಕ್ಷಿಣೆ ಹಾಗೂ ಆಸ್ತಿ ವಿಚಾರಕ್ಕೆ ಹೆಂಡತಿ ಮತ್ತು ಅವರ ಮನೆಯವರೊಂದಿಗೆ ಜಗಳ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಆದರೆ, ಇಂದು ಜಮೀನ ಬಳಿ ಇರುವಾಗಲೇ ಇಬ್ಬರ ನಡುವೆಯೂ ಜಗಳ ಆರಂಭವಾಗಿದೆ.
ತೆಂಗಿನ ತೋಟದಲ್ಲಿ ಗಂಡ ಹೆಂಡತಿ ಮಧ್ಯೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಶುರುವಾಗಿದೆ. ಈ ವೇಳೆ ರಮೇಶ್ ಅಶ್ವಿನಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.ಪತ್ನಿ ಎನ್ನುವುದನ್ನೂ ನೋಡದೆ ಎದೆ, ಕತ್ತು, ತಲೆ ಸೇರಿದಂತೆ ಹಲವು ಭಾಗಗಳಲ್ಲಿ ರಮೇಶ್ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ನಂತರ ಹೆಂಡತಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.ಪಕ್ಕದ ಜಮೀನಿನವರು ಅಶ್ವಿನಿ ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ದೂರನ್ನು ಆಧರಿಸಿ ಸ್ಥಳಕ್ಕೆ ಬಂದ ಅಕ್ಕೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮಾಹಿತಿ ಕಲೆ ಹಾಕಿದಾಗ ಗಂಡನೇ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲಿಯೇ ಪೊಲೀಸರು ಆರೋಪಿಯನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ.