ಬೆಂಗಳೂರು : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಇದೀಗ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ 5ನೇ ACMM ಕೋರ್ಟಿನ ನ್ಯಾಯಾಧೀಶರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ಇಂದು ಕಾಟನ್ ಪೇಟೆಯ ಪೊಲೀಸರು ಅವರನ್ನು ಬಂಧಿಸಿದ್ದರು. ಹಾಗಾಗಿ ಇಂದು ವಿಚಾರಣೆಗೆ NGV ಯಲ್ಲಿರುವ ಜಡ್ಜ್ ನಿವಾಸದಲ್ಲಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಹಾಜರುಪಡಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾದೀಶರು ಸೋಮವಾರ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಘಟನೆ ಹಿನ್ನೆಲೆ?
ಅನ್ಯ ರಾಜ್ಯದಿಂದ ಬೆಂಗಳೂರಿಗೆ ಕಲಬೆರಕೆ ಮಾಂಸ ಸಾಗಾಟದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಬೆಂಗಳೂರಿನ ಕಾಟನ್ಪೇಟೆ ಠಾಣಾ ಪೊಲೀಸರು ಬಂಧಿಸಿದ್ದರು.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಆಮದಾಗುತ್ತಿದ್ದ ಕುರಿ ಮಾಂಸದಲ್ಲಿ ಕಲಬೆರಕೆ ಮಾಂಸ ಮಿಶ್ರಿತವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ತಡರಾತ್ರಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್ಗಳಲ್ಲಿ 4,500 ಕೆಜಿ ಮಾಂಸವಿತ್ತು. ಆದರೆ, ಕುರಿಯ ಮಾಂಸದೊಂದಿಗೆ ಬೇರೆ ಮಾಂಸವನ್ನ ಮಿಶ್ರಣ ಮಾಡಲಾಗಿದೆ ಎಂದು ಆರೋಪಿಸಿದ್ದ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ಬಾಕ್ಸ್ಗಳನ್ನು ಹೊರಗೆ ತರುತ್ತಿದ್ದಂತೆ ತಡೆದಿದ್ದರು.
ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಪೊಲೀಸರ ವಶದಲ್ಲಿದ್ದಾಗ ಅಸ್ವಸ್ಥಗೊಂಡಿರುವುದರಿಂದ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಅವರನ್ನು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರುಪಡಿಸಿದಾಗ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.