ಬೆಂಗಳೂರು : ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಾಗೂ ಧರ್ಮ, ಜಾತಿ ನಿಂದನೆ ಮಾಡಿದ್ದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಅವರನ್ನು ಬುಧವಾರ ತಡರಾತ್ರಿ ಚಾಮರಾಜಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಸಚಿವರ ಆಪ್ತ ಸಹಾಯಕ ಬಿ. ಎಸ್.ಅಶೋಕ್ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಅಗತ್ಯ ಬಿದ್ದರೆ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ವೇಳೆ ಜಮೀರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಪುನೀತ್ ಕೆರೆಹಳ್ಳಿ ಅವರು ನ.11ರಂದು ಫೇಸ್‌ಬುಕ್‌ನಲ್ಲಿ ಸಚಿವರನ್ನು ನಿಂದಿಸಿದ್ದರು ಎನ್ನಲಾಗಿದೆ.
ನವೆಂಬರ್ 11 ರಂದು ಪುನೀತ್ ಕೆರೆ ಹಳ್ಳಿ ಅವರು ಯಾವುದೋ ಸ್ಥಳದಲ್ಲಿ ತಮ್ಮ ಸಾಮಾಜಿಕ ಜಾಲ ತಾಣದ ಫೇಸ್ ಬುಕ್ ಲಿಂಕ್ ನಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಕುರಿತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿರುತ್ತಾರೆ. ಧರ್ಮ -ಧರ್ಮ ಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಕಾರಿ ಹೇಳಿಕೆ ನೀಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.