ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯ ಸಂಕಷ್ಟ ಎದುರಿಸುತ್ತಿದ್ದರೆ, ಇನ್ನೊಂದೆಡೆ ಕೆಆರ್‌ಡಿಎಲ್ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಆ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಂಡ ಆರೋಪವಿದೆ. ಹೀಗಾಗಿ ಸಿಬಿಐ ತನಿಖೆಗೆ ವಹಿಸುವಂತೆ ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ನನಗೆ ಬಂದಿರುವ ಮಾಹಿತಿ ಪ್ರಕಾರ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಅಜಯ್ ಸಿಂಗ್ ಕೆಆರ್‌ಡಿಎಲ್ ಕಾಮಗಾರಿಗಳಿಗೆ ಬಿಡುಗಡೆಯಾದ ಹಣದಲ್ಲಿ ಶೇ.40ರಷ್ಟು ಕಮಿಷನ್ ತೆಗೆದು ಕೊಂಡಿದ್ದಾರೆ. ಇದರಲ್ಲಿ ಸುಮಾರು 500 ಕೋಟಿ ರು. ಹಣವನ್ನು ತೆಲಂಗಾಣ ಚುನಾವಣೆಗೆ ನೀಡಿರುವ ಆರೋಪವಿದೆ ಎಂದು ಹೇಳಿದರು.
ಕೆಆರ್‌ಡಿಎಲ್ ಅಧಿಕಾರಿಗಳನ್ನು ಕೇಳಿದರೆ ಹಣ ಇಲ್ಲ. ಒತ್ತಡ ಹಾಕಿ ಕೆಲಸ ಆಗಿದೆ ಎಂದು ತಿಳಿಸಿ ಹಣ ಪಡೆದಿದ್ದಾರೆ. ಶಾಸಕರು ಕ್ರಿಯಾ ಯೋಜನೆ ಇಲ್ಲದೆ ಬಿಲ್ ಮಾಡಿ ಕೊಂಡಿದ್ದಾಗಿ ತಿಳಿಸುತ್ತಾರೆ. ಈ ಹಗರಣದ ಬಗ್ಗೆ ತನಿಖೆಯಾಗಬೇಕು. ಕ್ಲೀನ್ ಚಿಟ್ ನೀಡುವ ಎಸ್‌ಐಟಿ ಅಥವಾ ಸಿಐಡಿಗೆ ತನಿಖೆ ಬೇಡ ಎಂದಿದ್ದಾರೆ.