ಬೆಂಗಳೂರು : ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ, ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ. ನಮ್ಮ ನಡುವೆ ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಚೀಫ್ ಮಿನಿಸ್ಟರ್ ಏನು ಹೇಳಿದ್ದಾರೋ ಅದೇ ಫೈನಲ್ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಫೈನಲ್. ಸಿಎಂ ಹೇಳಿದ ಮೇಲೆ ನನಗೆ ಯಾವುದೇ ತಕರಾರು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಅದೇ ಫೈನಲ್. ನಾನು ಕುರ್ಚಿಗೆ ನಿಷ್ಠನಾಗಿಲ್ಲ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಸಿಎಂ ಹೇಳಿದ ಮೇಲೆ ಪ್ರಶ್ನೆ ಇಲ್ಲ ಆ ಕುರಿತು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
ಇಂದು ಅಧಿಕಾರ ಹಂಚಿಕೆಯ ಕುರಿತು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಹೈಕಮಾಂಡ್ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಮಧ್ಯೆ ಯಾವ ಒಪ್ಪಂದವೂ ಆಗಿಲ್ಲ ಎಂದರು. ಇದಕ್ಕೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಮ್ಮ ಚೀಫ್ ಮಿನಿಸ್ಟರ್ ಏನು ಹೇಳುತ್ತಾರೋ ಅದೇ ಫೈನಲ್ ಅವರು ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ ಎಂದು ತಿಳಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವ ವಿಚಾರವಾಗಿ, ಯಾವುದೇ ವಿಚಾರಣೆ ಗುಪ್ತವಾಗಿ ನಡೆಯುವಂತದ್ದು. ಏನಾದರೂ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ಕೋಟಿಗೆ ಸಲ್ಲಿಸದೆ ಮಾಧ್ಯಮಕ್ಕೆ ಬಿಡುಗಡೆ ಮಾಡಿದರೆ ಹೇಗೆ? ಎಷ್ಟು ಡಿಪ್ರೆಶನ್ ಡಿಸ್ಟರ್ಬ್ ಆಗಿದ್ದಾರೆ ಅಂತ ಅರ್ಥ ಆಗುತ್ತದೆ. ಏನು ಇಲ್ಲ ಅನ್ನೋದು ಅರ್ಥ ಆಗುತ್ತಿದೆ. ಆದರೂ ಚಿಂತೆ ಇಲ್ಲ ನಮ್ಮ ಹೋರಾಟ ಮುಂದುವರಿಯುತ್ತದೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಹೋರಾಟ ಮಾಡುತ್ತದೆ ಎಂದು ತಿಳಿಸಿದರು.