ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಹೊಸದಾಗಿ ಗುರುತಿಸಿರುವ 5 ಕಾರ್ಪೊರೇಷನ್ಗಳ ಚುನಾವಣೆಯನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಸುವ ಸಾಧ್ಯತೆ ಇದ್ದು, ಈ ಕುರಿತು ಸುಪ್ರೀಂ ಕೋರ್ಟ್ಗೆ ಕರ್ನಾಟಕ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
2015ರ ಆಗಸ್ಟ್ನಲ್ಲಿ ಬಿಬಿಎಂಪಿಯ 198 ವಾರ್ಡ್ಗಳಿಗೆ ಕೊನೆಯದಾಗಿ ಚುನಾವಣೆ ನಡೆದಿತ್ತು. ಕೌನ್ಸಿಲ್‌ನ ಅವಧಿ 2020ರ ಸೆಪ್ಟೆಂಬರ್ನಲ್ಲಿ ಮುಗಿದಿದ್ದರೂ ಕಾನೂನು ಮತ್ತು ಆಡಳಿತಾತ್ಮಕ ತೊಡಕಿನಿಂದಾಗಿ ಚುನಾವಣೆ ವಿಳಂಬವಾಗಿದೆ. ಇದೀಗ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಲ್ಲಿದ್ದು, ವರ್ಷಾಂತ್ಯದೊಳಗೆ ಚುನಾವಣಾಪೂರ್ವ ಸಿದ್ಧತಾ ಹಂತವನ್ನು ಪೂರ್ಣಗೊಳಿಸಲು ರಾಜ್ಯ ಬದ್ದವಾಗಿದೆ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನವೆಂಬರ್ 1ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಷಿ ತಿಳಿಸಿದ್ದಾರೆ. ಸರ್ಕಾರ ವಿಂಗಡನೆ ಮತ್ತು ವಾರ್ಡ್ ರಿಸರ್ವೇಶನ್ ಜವಾಬ್ದಾರಿಯನ್ನು ಮುಗಿಸಿದರೆ ನವೆಂಬರ್ 1ರಿಂದ ನಾವು ನಮ್ಮ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನವೆಂಬರ್ 30ರ ಬಳಿಕವೇ ನಿಜವಾದ ಗ್ರೌಂಡ್ವರ್ಕ್ ಶುರುವಾಗುತ್ತದೆ. ಮತದಾರರ ಸಮೀಕ್ಷೆ, ವಾರ್ಡ್ ಆಧಾರಿತ ಹೊಂದಾಣಿಕೆ ಸೇರಿದಂತೆ ಅನೇಕ ಕೆಲಸಗಳನ್ನು ಚುನಾವಣಾ ಆಯೋಗ ನಡೆಸಲಿದ್ದು, ಇದಕ್ಕಾಗಿ ಎರಡು ತಿಂಗಳ ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ತಕ್ಷಣಕ್ಕೆ ಮಾಡಲು ಸಾಧ್ಯವಿಲ್ಲ. ಸರ್ಕಾರದ ಅಫಿಡವಿಟ್ ಅನುಸಾರ ಎಲ್ಲವೂ ಸಾಗಿದರೆ, ಸ್ಥಳೀಯ ಸಂಸ್ಥೆ ಚುನಾವಣೆ 2026ರ ಫೆಬ್ರವರಿಗೆ ನಡೆಯಲಿದೆ.