ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡುಯೂರಪ್ಪನವರಿಗೆ ಹೊಸ ಸಂಕಷ್ಟ ಎದುರಾಗಿದೆ. ಡಿಸೆಂಬರ್ 2ರಂದು ಅಂದರೆ ಇಂದು ಖುದ್ದು ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ನ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಎಸ್ಪಿಪಿ ಅಶೋಕ್ ನಾಯ್ಕ್ ಅವರು ಅರ್ಜಿ ಸಲ್ಲಿಸಿದ್ದರು. ಅದರಂತೆ ಬಿಎಸ್ ಯಡಿಯೂರಪ್ಪನವರ ಜೊತೆಗೆ ಇತರೆ ಮೂವರು ಆರೋಪಿಗಳಾದ ವೈ.ಎಂ. ಅರುಣ, ರುದ್ರೇಶ್ ಮರುಳಸಿದ್ದಯ್ಯ, ಜಿ. ಮರಿಸ್ವಾಮಿ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.
ಪೋಕ್ಸೋ ಕೇಸ್ ಹಿನ್ನೆಲೆ ಸಮನ್ಸ್ ರದ್ದು ಕೋರಿದ್ದ ಬಿ.ಎಸ್ ಯಡಿಯೂರಪ್ಪ ಅರ್ಜಿ ಹೈಕೋರ್ಟ್ ನಿಂದ ವಜಾ ಹಿನ್ನೆಲೆ ಇಂದು ಕೋರ್ಟ್ ಗೆ ಯಡಿಯೂರಪ್ಪ ಖುದ್ದು ಹಾಜರಾಗಬೇಕಾಗಿದೆ. 1ನೇ ತ್ವರಿತ ಕೋರ್ಟ್ ಸಮನ್ಸ್ ಜಾರಿಗೋಳಿಸಿತ್ತು. ವೈ.ಎಂ ಅರುಣ್, ರುದ್ರೇಶ್ ಮರುಳಸಿದ್ದಯ್ಯ, ಜಿ. ಮರಿಸ್ವಾಮಿಗೂ ಸಮನ್ಸ್ ನೀಡಲಾಗಿತ್ತು. ಹಾಗಾಗಿ ಇಂದು ಯಡಿಯೂರಪ್ಪ ಸೇರಿ ಇವರೆಲ್ಲರೂ ಕೋರ್ಟ್ ಗೆ ಹಾಜರಾಗಬೇಕು.
ಏನಿದು ಪ್ರಕರಣ?
2024ರಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಅವರ ಬಳಿ ಸಹಾಯ ಕೇಳಿ ಹೋದಾಗ ಯಡಿಯೂರಪ್ಪನವರು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024ರಲ್ಲಿ ಆ ಬಾಲಕಿಯ ತಾಯಿ ದೂರು ನೀಡಿದ್ದರು. ಹೀಗಾಗಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








