ಮಂಗಳೂರು : ಹಿಂದೂ ಮುಖಂಡನ ಮೊಬೈಲ್ನಲ್ಲಿ ರಾಜಕಾರಣಿ ಒಬ್ಬರ ಅಶ್ಲೀಲ ವಿಡಿಯೋ ಪತ್ತೆ ಆಗಿರುವ ಬಗ್ಗೆ ಕರಾವಳಿಯಲ್ಲಿ ಭಾರಿ ಚರ್ಚೆ ಶುರುವಾಗಿದೆ. ಮಂಗಳೂರು ಪೊಲೀಸರ ತನಿಖೆ ವೇಳೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಮೊಬೈಲ್ನಲ್ಲಿ ಐವತ್ತಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದರಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಕೂಡ ಇದೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಮೂಡಬಿದಿರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ?
2024ರಲ್ಲಿ ಮೂಡುಬಿದಿರೆ ತಾಲೂಕಿನ ಮಿಜಾರು ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಹಾಗೂ ಅವರ ಪುತ್ರಿಗೆ, ಬಸ್ ಮಾಲಕನಿಗೆ ಒತ್ತಡ ಹಾಕಿ ಸಮಿತ್ ರಾಜ್ 5 ಲಕ್ಷ ರೂ. ಪರಿಹಾರ ತೆಗೆಸಿಕೊಟ್ಟಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಮಾಲಕ, ಸಮಿತ್ ರಾಜ್ ವಿರುದ್ಧ ಬೆದರಿಕೆ ಮತ್ತು ಅಕ್ರಮ ಹಣ ವಸೂಲಿ ಆರೋಪಿಸಿ 2024ರಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸುವಂತೆ ಇತ್ತೀಚೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪೊಲೀಸರಿಗೆ ಸೂಚನೆ ನೀಡಿದ್ದರು. ಹೀಗಾಗಿ ಸಮಿತ್ ರಾಜ್ ನನ್ನು ಬಂಧಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ ಪಿ.ಜಿ. ಜೂ.26ರಂದು ಪೊಲೀಸ್ ಠಾಣೆಗೆ ಕರೆತಂದಿದ್ದರು. ಬಳಿಕ ಸಮಿತ್ ಸಮಿತ್ ರಾಜ್ ನ ಫೋನ್ ನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೆನ್ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಈ ವೇಳೆ ಮೊಬೈಲ್ ನ ದತ್ತಾಂಶಗಳನ್ನು ರಿಟ್ರೈವ್ ಮಾಡಿದ ವೇಳೆ ಮಹಿಳೆಯರೊಂದಿಗಿನ ಅಶ್ಲೀಲ ವಿಡಿಯೋಗಳು ಮತ್ತು ವೆಬ್ ಸೈಟ್ ಗಳಿಂದ ಡೌನ್ ಲೋಡ್ ಮಾಡಲಾಗಿದ್ದ ಸುಮಾರು 40ರಿಂದ 50 ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.ಈ ಸಂಬಂಧ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೀಡಿರುವ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.