ಬೆಂಗಳೂರು : ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಂಬಂಧ ಇಂದಿನಿಂದ ಮೇ. 17 ರವರೆಗೆ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆಗೆ 65 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬಗ್ಗೆ ಸದಾಶಿವ ಆಯೋಗ ವರದಿ ಕೊಟ್ಟಿತ್ತು. 2011ರ ಜನಸಂಖ್ಯೆ ಆಧರಿಸಿ ವರದಿಯನ್ನು ಕೊಟ್ಟಿದ್ದರು. ಇದೀಗ ಇಂದಿನಿಂದ ಮೇ.17 ರವರೆಗೆ ಒಳಮೀಸಲಾತಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೂರು ಹಂತಗಳಲ್ಲಿ ಎಸ್ ಸಿ ಒಳಮೀಸಲಾತಿ ಸಮೀಕ್ಷೆ ನಡೆಯಲಿದ್ದು, ಎಸ್ ಸಿಗಳು ತಮ್ಮ ಜಾತಿಯನ್ನು ಸ್ವಯಂ ಘೋಷಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲು ಕಲ್ಪಿಸುವ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನ್ಯಾ| ನಾಗಮೋಹನ್ ದಾಸ್ ಆಯೋಗ ಇಂದಿನಿಂದ ಸಮೀಕ್ಷೆಗೆ ಚಾಲನೆ ನೀಡಲಿದ್ದು, ಗಣತಿದಾರರು ಪ್ರತಿ ಮನೆ ಮನೆಗೂ ಆಗಮಿಸಿ ಸಮೀಕ್ಷೆ ನಡೆಸಲಿದ್ದಾರೆ. ಗಣತಿದಾರರು ಕೇವಲ ಪರಿಶಿಷ್ಟ ಜಾತಿಗೆ ಸೇರಿದವರ ಮನೆಗೆ ಮಾತ್ರವಲ್ಲದೆ ಎಲ್ಲ ಮನೆಗಳಿಗೂ ಭೇಟಿ ನೀಡಲಿದ್ದಾರೆ. ಈ ವೇಳೆ ಎಸ್ಸಿ ಅಲ್ಲದ ಕುಟುಂಬಗಳಿಂದ ಮನೆ ಸಂಖ್ಯೆ ಆ್ಯಪ್ ನಲ್ಲಿ ನಮೂದಿಸಿ ಕುಟುಂಬ ಸದಸ್ಯರ ಸಂಖ್ಯೆ ದಾಖಲಿಸಲಿದ್ದಾರೆ ಎಂದು ಹೇಳಿದ್ದಾರೆ.